ಮಸ್ಕಿ ಉಪಚುನಾವಣೆ ಮತ ಎಣಿಕೆ – ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

– ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ

ರಾಯಚೂರು: ನಾಳೆ ನಡೆಯಲಿರುವ ಮಸ್ಕಿ ಉಪಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದ ಎಸ್‍ಆರ್‍ಪಿಎಸ್ ಪಿಯು ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಯಮ ಪಾಲನೆ ಮಾಡಿ ಮತ ಎಣಿಕೆಗೆ ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಚುನಾವಣಾಧಿಕಾರಿ ಹಾಗೂ ರಾಯಚೂರು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ. 3 ಕೊಠಡಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಕೊಠಡಿಗೆ 4 ರಂತೆ ಒಟ್ಟು 12 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಕೌಂಟಿಂಗ್ ಸೂಪರ್ ವೈಸರ್, ಕೌಂಟಿಂಗ್ ಅಸಿಸ್ಟೆಂಟ್, ಮೈಕ್ರೋ ಅಬ್ಸರ್ವರ್ ಕಾರ್ಯನಿರ್ವಹಿಸುತ್ತಾರೆ. ಪ್ರತಿ ಟೇಬಲ್‍ಗೆ ಒಬ್ಬ ಮತ ಎಣಿಕೆ ಏಜೆಂಟ್‍ಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಮಸ್ಕಿ ಕಣದಲ್ಲಿ 8 ಜನ ಅಭ್ಯರ್ಥಿಗಳು ಇದ್ದು, ಕೋವಿಡ್ ನಿಯಮದಂತೆ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಬಳಕೆ ಕಡ್ಡಾಯ ಹಾಗೂ ಮತ ಎಣಿಕೆ ವೇಳೆ ಇಬ್ಬರ ಮಧ್ಯೆ ಒಬ್ಬ ಏಜೆಂಟ್ ಪಿಪಿಇ ಕಿಟ್ ಧರಿಸಬೇಕು.

ಒಟ್ಟು 26 ಸುತ್ತಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ವಿಜಯೋತ್ಸವ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ ಹೊರಗಡೆ ಜನ ಸೇರುವುದು ಸಹ ಚುನಾವಣೆ ಆಯೋಗ ನಿಷೇಧಿಸಿದೆ ಅಂತ ರಾಯಚೂರು ಡಿಸಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.

ಚುನಾವಣೆಯಲ್ಲಿ ಒಟ್ಟು 1,45,458 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 70.48 ರಷ್ಟು ಮತದಾನವಾಗಿತ್ತು. 175 ಅಂಚೆ ಮತ ಪತ್ರಗಳಿವೆ. ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ಹಾಗೂ ಬಿಜೆಪಿಯ ಪ್ರತಾಪಗೌಡ ಪಾಟೀಲ್ ಮಧ್ಯೆ ತೀವ್ರ ಪೈಪೋಟಿಯಿದೆ. ಒಟ್ಟು 8 ಜನ ಅಭ್ಯರ್ಥಿಗಳು ಕಣದಲ್ಲಿದ್ದು ಭವಿಷ್ಯ ನಾಳೆ ಪ್ರಕಟವಾಗಲಿದೆ.

Comments

Leave a Reply

Your email address will not be published. Required fields are marked *