ಮಸ್ಕಿ ಉಪಚುನಾವಣೆ ಬಿಜೆಪಿ ಸಭೆ- ಕೊರೊನಾ ನಿಯಮ ಗಾಳಿಗೆ

ರಾಯಚೂರು: ಮಸ್ಕಿ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಪಾಟೀಲ್ ಗೆಲುವಿಗಾಗಿ ಮಸ್ಕಿಯಲ್ಲಿ ಬೂತ್ ಸಮಿತಿ ಕಾರ್ಯಕರ್ತರ ಸಭೆ ಆಯೋಜಿಸಿತ್ತು. ಸಭೆಯಲ್ಲಿ ಬಿಜೆಪಿ ನಾಯಕರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಮಸ್ಕಿ ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ನಡೆದ ಸುಮಾರು 231 ಬೂತ್ ಸಮಿತಿಗಳ ಸಭೆಯಲ್ಲಿ ಒಂದು ಬೂತ್ ಸಮಿತಿಯಿಂದ 12 ಜನ ಕಾರ್ಯಕರ್ತರು ಆಗಮಿಸಿದ್ದು, ಒಟ್ಟು 2,500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

ಸಭೆಯಲ್ಲಿ ಸಚಿವ ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ, ಸಂಸದ ರಾಜಾ ಅಮರೇಶ್ವರ ನಾಯಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಭಾಗಿಯಾಗಿದ್ದರು. ಆದರೆ ಕೋವಿಡ್ ನಿಯಮಗಳು ಮಾತ್ರ ಪಾಲನೆಯಾಗಿರಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಾವು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ, ಆದರೆ ಜನ ಕೇಳುವುದಿಲ್ಲ ಎಂದರು. ಈ ಬಗ್ಗೆ ವಿಜಯೇಂದ್ರರನ್ನು ಪ್ರಶ್ನಿಸಿದರೆ, ಉತ್ತರಿಸದೆ ಕಾರ್ಯಕರ್ತರಿಗೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿ ಹೊರಟರು.

ಸಾರ್ವಜನಿಕ ಸಭೆ, ಸಮಾರಂಭ, ವಿವಾಹ ಸೇರಿದಂತೆ ಎಲ್ಲೆಡೆ ಅನ್ವಯವಾಗುವ ಕಠಿಣ ಕೋವಿಡ್ ನಿಯಮಗಳು ಚುನಾವಣಾ ಪ್ರಚಾರಕ್ಕೆ ಮಾತ್ರ ಅನ್ವಯವಾಗುತ್ತಿಲ್ಲ. ಪ್ರಚಾರ ಸಭೆ, ಸಮಾವೇಶಗಳಲ್ಲಿ ಭಾಗವಹಿಸುವ ಜನ ಕನಿಷ್ಠ ಮಾಸ್ಕ್ ಸಹ ಧರಿಸುವುದಿಲ್ಲ. ಸ್ವತಃ ರಾಜಕೀಯ ನಾಯಕರೇ ಮಾಸ್ಕ್ ಧರಿಸದೇ ಪ್ರಚಾರ ಕಾರ್ಯ ನಡೆಸಿದ್ದಾರೆ. ಕೋವಿಡ್ ನಿಯಮಗಳು ಚುನಾವಣಾ ಪ್ರಚಾರಕ್ಕೆ ಯಾಕೆ ಅನ್ವಯವಾಗುತ್ತಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *