ಮಳೆ ಆತಂಕ- ಮನೆ ಖಾಲಿ ಮಾಡ್ತಿದ್ದಾರೆ ಮಡಿಕೇರಿ ನಿವಾಸಿಗಳು

ಮಡಿಕೇರಿ: ಕೊಡಗಿಗೂ-ಮಳೆಗೂ ಒಂದಿಲ್ಲೊಂದು ನಂಟು, ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. 2018-19ರಲ್ಲಿ ಸುರಿದ ಮಹಾಮಳೆ ಪ್ರವಾಹವನ್ನೇ ಸೃಷ್ಟಿಸಿತ್ತು. ಹಲವರು ಪ್ರಾಣ ಸಹ ಕಳೆದುಕೊಂಡಿದ್ದರು. ಹೀಗಾಗಿ ಮಡಿಕೇರಿ ನಗರ ವಾಸಿಗಳು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ.

ಎತ್ತರ ಹಾಗೂ ಇಳಿಜಾರು ಪ್ರದೇಶಗಳಲ್ಲಿ ವಾಸಿಸುತ್ತಿರುವ ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರಗಳ ನಿವಾಸಿಗಳಿಗೆ ಪ್ರತಿವರ್ಷ ಜಿಲ್ಲಾಡಳಿತ ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ತಿಳಿಸಿದರೂ ಹಲವರು ಆದೇಶ ಪಾಲಿಸುವುದಿಲ್ಲ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ನಡೆದ ಘಟನೆಗಳು ಕಣ್ಮುಂದೆ ಇರುವುದರಿಂದ ಈ ವರ್ಷದ ಮಳೆಗಾಲ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ಬಾರಿ ಜಿಲ್ಲಾಡಳಿತ ನೋಟಿಸ್ ಕೊಡದಿದ್ದರೂ ಮನೆ ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಾರೆ.

ಬಡಾವಣೆಯ ಹಲವು ನಿವಾಸಿಗಳು ಮಳೆಗಾಲದ ಅಂತ್ಯದವರೆಗೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡುತ್ತಿದ್ದಾರೆ. 2018ರಲ್ಲಿ ಸುರಿದ ಮಹಾಮಳೆಯಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಯಿತು. ತೋಡು ನೀರು ಹೆಚ್ಚಾದ ಪರಿಣಾಮ ತೊಂದರೆ ಅನುಭವಿಸಿದ್ದೇವೆ. ಶೀತದ ಪ್ರಮಾಣ ಹೆಚ್ಚಿರುವುದರಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಮಗೆ ನೊಟೀಸ್ ಕೊಡದಿದ್ದರೂ ಸ್ವಯಂ ಪ್ರೇರಿತವಾಗಿ ಬೇರೆಡೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮನೆಯಲ್ಲಿ ಮಕ್ಕಳು ಹಾಗೂ ವಯಸ್ಸಾದವರು ಇದ್ದಾರೆ. ಮನೆಯ ಸುತ್ತಲೂ ಬಿರುಕು ಇರುವುದರಿಂದ ಮಳೆಗೆ ಯಾವಾಗ ಬೇಕಾದರೂ ಅನಾಹುತ ಸಂಭವಿಸಬಹುದು. ಹೀಗಾಗಿ ನಾವೇ ಮನೆ ಖಾಲಿ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *