ಮಲೆನಾಡು ಭಾಗದಲ್ಲಿ ಮಳೆ ಅಬ್ಬರ – ರಸ್ತೆಯಲ್ಲಿ ನದಿಯಂತೆ ಹರಿದ ನೀರು

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮೂಡಿಗೆರೆ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನನ ನಂತರ ಆರಂಭವಾದ ಧಾರಾಕಾರ ಮಳೆ ಸಂಜೆವರೆಗೂ ಮನಸ್ಸೋ ಇಚ್ಛೆ ಸುರಿದಿದೆ.

ಮೂಡಿಗೆರೆ ಪಟ್ಟಣದಲ್ಲಿ ಭಾರೀ ಗಾಳಿಗೆ ಮರದ ಕೊಂಬೆ ಮುರಿದು ಬಿದ್ದು ರಸ್ತೆ ಬದಿ ನಿಂತಿದ್ದ ಕಾರು-ಬೈಕ್‍ಗಳು ಜಖಂಗೊಂಡಿವೆ. ಧಾರಾಕಾರ ಮಳೆಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕೆಲವೆಡೆ ಅಂಗಡಿ ಮುಂಗಟ್ಟಿನ ಒಳಗಡೆಯೂ ಮಳೆ ನೀರು ನುಗ್ಗಿ ಪರಿತಪಿಸುವಂತಾಯಿತು.

ಮಧ್ಯಾಹ್ನದಿಂದ ಒಂದೇ ಸಮನೆ ಸುರಿದ ಮಳೆಯಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಜನಸಾಮಾನ್ಯರು ಪರದಾಡುವಂತಾಯಿತು. ನಿನ್ನೆ ಕೂಡ ಮೂಡಿಗೆರೆ ತಾಲೂಕಿನಾದ್ಯಂತ ಮಳೆಯ ಸಿಂಚನವಾಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರು, ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ. ಕಳಸ ಭಾಗದಲ್ಲೂ ಮಳೆಯ ಅಬ್ಬರ ಜೋರಿದ್ದು ಕಳಸ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೀರು ನದಿಯಂತೆ ಹರಿದಿದ್ದು ಜನ ಮಳೆಯಿಂದ ಪರಿತಪಿಸುವಂತಾಗಿತ್ತು.

ಕಳಸದಲ್ಲಿ ಸಂಜೆ ವೇಳೆಗೆ ದಿಢೀರನೆ ಆರಂಭವಾದ ಗುಡುಗು ಸಹಿತದ ಮಳೆಗೆ ಕಳಸ ಪಟ್ಟಣವೇ ಸಂಪೂರ್ಣ ಸ್ತಬ್ಧವಾಗಿತ್ತು. ಮಳೆಯಿಂದ ಒಂದು ಗಂಟೆಗಳ ಕಾಲ ವಾಹನ ಸಂಚಾರ, ಜನ ಸಂಚಾರವೂ ಸ್ಥಬ್ಧಗೊಂಡಿತ್ತು. ಹಳ್ಳಿಯಿಂದ ಪೇಟೆಗೆ ಬಂದಿದ್ದ ಜನ ಹಳ್ಳಿಗಳಿಗೆ ತೆರಳಲು ಪರದಾಡಿದರು. ಕೆಲವೆಡೆ ಸೂಕ್ತವಾದ ಚರಂಡಿಯ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಪ್ರಯಾಣಕ್ಕೆ ತೊಂದರೆ ತಂದೊಡ್ಡಿತ್ತು. ಕಳಸ ಪಟ್ಟಣದ ಮಹಾವೀರ ಕಾಂಕ್ರೀಟ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತು ವಾಹನ ಸವಾರರು ಹಾಗೂ ರಸ್ತೆ ಬದಿಯ ಮನೆಗಳಿಗೆ ತೊಂದರೆಯಾಗಿತ್ತು.

Comments

Leave a Reply

Your email address will not be published. Required fields are marked *