ಮಲೆನಾಡಲ್ಲಿ ಮೈದುಂಬಿ ಹರಿಯುತ್ತಿವೆ ಜಲಪಾತಗಳು- ಪ್ರವಾಸಿ ತಾಣಗಳಿಗೆ ಕಾಡ್ತಿದೆ ಅನಾಥ ಪ್ರಜ್ಞೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸಮೃದ್ಧ ಮಳೆಯಿಂದಾಗಿ ಮಲೆನಾಡ ಜಲಪಾತಗಳಿಗೆ ಜೀವಕಳೆ ಬಂದಿದೆ. ಆದರೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

ಜಿಲ್ಲೆಯ ಚಾರ್ಮಾಡಿ ಫಾಲ್ಸ್, ತೀರ್ಥಕೆರೆ ಫಾಲ್ಸ್, ಸಗೀರ್, ಫಾಲ್ಸ್, ಸಿರಿಮನೆ ಫಾಲ್ಸ್, ಕಲ್ಲತ್ತಿಗರಿ ಫಾಲ್ಸ್, ಶಂಕರ್ ಫಾಲ್ಸ್ ಸೇರಿದಂತೆ ಜಿಲ್ಲೆಯ ದಶದಿಕ್ಕುಗಳ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ಫಾಲ್ಸ್‍ಗಳು ಕಣ್ಣು ಕೊರೈಸುವಂತೆ ಧುಮ್ಮಿಕ್ಕುತ್ತಿವೆ. ಚಾರ್ಮಾಡಿಯ ಹಾವು-ಬಳುಕಿನ ರಸ್ತೆಯಲ್ಲಿ ಹತ್ತಾರು ಜಲಪಾತಗಳಿವೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಜಲಪಾತಗಳಲ್ಲಿ ಪ್ರಕೃತಿ ಸೌಂದರ್ಯ ಮೇಳೈಸಿದೆ. ನೀರಿನ ವೇಗದ ಶಬ್ಧವೇ ಮನಸ್ಸಿಗೆ ಮುದ ನೀಡುತ್ತಿದೆ. ಮೋಡದ ಜೊತೆ ಮಂಜಿನ ಕಣ್ಣಾಮುಚ್ಚಾಲೆ ಆಟ. ಕ್ಷಣಕ್ಕೊಮ್ಮೆ ಬದಲಾಗೋ ವಾತಾವರಣ. ತಣ್ಣನೆಯ ಗಾಳಿ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯ ತೀರ್ಥಕೆರೆ ಫಾಲ್ಸ್ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ರಸ್ತೆ ಬದಿಯಲ್ಲೇ ಸಿಗುವ, ಸುಮಾರು 120 ಅಡಿ ಎತ್ತರದಿಂದ ಇಳಿಜಾರಿನಲ್ಲಿ ಜಾರಿ ಬರುವ ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ. ಶೃಂಗೇರಿಗೆ ಭೇಟಿ ನೀಡುವ ಪ್ರವಾಸಿಗರು ಜಯಪುರ ಮಾರ್ಗವಾಗಿ ಹೊರನಾಡಿಗೆ ಹೋಗುವವರಿಗೆ ಈ ಜಲಪಾತದ ದರ್ಶನವಾಗಲಿದೆ. ಇದೊಂದೆ ಅಲ್ಲದೆ ಕಾಫಿನಾಡಿನ ದಶದಿಕ್ಕುಗಳಲ್ಲೂ ಇಂತಹ ನೂರಾರು ಜಲಪಾತದ ವೈಭವ ಮೇಳೈಸಿದೆ. ಜಿಲ್ಲೆಯ ಮಲೆನಾಡು ಭಾಗದ ಬಹುತೇಕ ಜಲಪಾತಗಳು ಮೂರು ದಿನದ ಮಹಾಮಳೆಗೆ ಮೈದುಂಬಿ ಹರಿಯುತ್ತಿವೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಕಾಫಿನಾಡಿಗೆ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಅನಾಥಪ್ರಜ್ಞೆ ಕಾಡುತ್ತಿದೆ.

Comments

Leave a Reply

Your email address will not be published. Required fields are marked *