ಮಲೆನಾಡಲ್ಲಿ ಮುಗಿಯದ ಕಾಡಾನೆ ಕಾಟ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಹಾಗೂ ಹಾವಳಿ ಹತೋಟಿಗೆ ಬರುವ ಲಕ್ಷಣಗಳೇ ಇಲ್ಲದಂತಾಗಿದೆ. ಆಗಾಗ್ಗೆ ಹೊಲಗದ್ದೆ-ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳು ಈಗೀಗ ಮಲೆನಾಡಿಗರಿಗೆ ರಸ್ತೆ ಮಧ್ಯೆ ಸ್ನೇಹಿತರು, ನೆಂಟರಂತೆ ಸಿಗುತ್ತಿದ್ದು, ಮಲೆನಾಡಿಗರು ಭಯಭೀತರಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಪ್ರವಾಸಿತಾಣ ದೇವರ ಮನೆ ಬಳಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಕಾರಲ್ಲಿ ಸಂಚರಿಸುತ್ತಿದ್ದವರ ಆತಂಕಕ್ಕೆ ಕಾರಣವಾಗಿದೆ. ಒಂಟಿ ಸಲಗದ ಭಯದ ಮಧ್ಯೆಯೂ ಸವಾರರು ಕಾಡಾನೆ ಫೋಟೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಮೋದ್ ಮತ್ತವರ ಸ್ನೇಹಿತರು ದೇವರಮನೆ ಮಾರ್ಗವಾಗಿ ಹೋಗುವಾಗ ಕಾಡಾನೆಯ ಗೋಚರವಾಗಿದೆ. ಆನೆ ಕಂಡು ಗಾಬರಿಯಾದ ಯುವಕರು ಕಾರಿನ ಒಳಭಾಗದಿಂದಲೇ ವಿಡಿಯೋ ಮಾಡಿದ್ದಾರೆ. ಆನೆ ರಸ್ತೆ ದಾಟಿ ಕಾಡಿಗೆ ಹೋದ ಬಳಿಕ ಯುವಕರು ಮುಂದೆ ಸಾಗಿದ್ದಾರೆ.

ಮಲೆನಾಡ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಆಗಾಗ್ಗೆ ನಡೆಯುತ್ತಿರುತ್ತೆ. ತಿಂಗಳ ಹಿಂದಷ್ಟೆ ಬಾನಳ್ಳಿ ಗ್ರಾಮದಲ್ಲಿ ಕಾಫಿ-ಬಾಳೆ ಬೆಳೆಯನ್ನ ನಾಶ ಮಾಡಿದ್ದವು. ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಕಳೆದ ಒಂದೆರಡು ವರ್ಷಗಳಿಂದಲೂ ಕೂಡ ಕಾಡಾನೆ ಹಾವಳಿ ಮಿತಿ ಮೀರಿದೆ. ಕೆಲವೆಡೆ ಒಂಟಿ ಸಲಗದ ಕಾಟವಿದ್ದರೆ, ಮತ್ತೆ ಕೆಲವೆಡೆ ಕಾಡಾನೆಗಳ ಹಿಂಡು ಮಲೆನಾಡಿಗರ ನಿದ್ದೆಗೆಡಿಸಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನುಗ್ತಿರುವ ಕಾಡಾನೆಗಳಿಂದ ಕಾಫಿ ತೋಟ ಕೂಡ ಹಾಳಾಗುತ್ತಿವೆ.

ಮೂಡಿಗೆರೆ ತಾಲೂಕಿನ ಬಾನಳ್ಳಿ, ಭಾರತೀಬೈಲು, ಬೆಳಗೋಡ, ಗೌಡಹಳ್ಳಿ, ದೇವರಮನೆ, ಊರುಬಗೆ, ಸಾರಗೋಡು, ಕೆಂಜಿಗೆ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಕಾಡಾನೆ ಹಾವಳಿಗೆ ಮಲೆನಾಡಿಗರು ಆತಂಕದಿಂದಲೇ ಬದುಕುವಂತಾಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿಗೆ ಎರಡ್ಮೂರು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನ ಸ್ಥಳಾಂತರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಕೂಡ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ.

Comments

Leave a Reply

Your email address will not be published. Required fields are marked *