ಮರಳೀಧರನ್ ಬಯೋಪಿಕ್‍ನಿಂದ ವಿಜಯ್ ಸೇತುಪತಿ ಹೊರಕ್ಕೆ – ಮಗಳಿಗೆ ಅತ್ಯಾಚಾರ ಬೆದರಿಕೆ

ಚೆನ್ನೈ: ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರ್ ಅವರ ಬಯೋಪಿಕ್‍ನಿಂದ ಹೊರಬಂದ ನಟ ವಿಜಯ್ ಸೇತುಪತಿಯವರ ಮಗಳಿಗೆ ವ್ಯಕ್ತಿಯೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ.

ಶ್ರೀಲಂಕಾದ ಸ್ಪಿನ್ ಮಾತ್ರಿಕ ಮಾಜಿ ಆಟಗಾರ ಮುತ್ತಯ್ಯ ಮುರುಳೀಧರನ್ ಅವರ ಬಯೋಪಿಕ್ ಮಾಡಲು ತಮಿಳಿನ ನಟ ವಿಜಯ್ ಸೇತುಪತಿ ಸಿದ್ಧವಾಗಿದ್ದರು. ಚಿತ್ರ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾಗೆ ತಮಿಳುನಾಡಿನ ಜನ ವಿರೋಧ ಮಾಡಿದ್ದರು. ಈ ಕಾರಣದಿಂದ ವಿಜಯ್ ಸೇತುಪತಿ ಸಿನಿಮಾದಿಂದ ಹೊರಬಂದಿದ್ದರು.

ಈಗ ಸಿನಿಮಾದಿಂದ ಹೊರಬಂದ ವಿಜಯ್ ಸೇತುಪತಿಯವರ ಅಪ್ರಾಪ್ತ ಮಗಳಿಗೆ ಟ್ವಿಟ್ಟರಿನಲ್ಲಿ ಖಾತೆಯೊಂದಿರುವ ವಿಜಯ್ ಎಂಬ ಹೆಸರಿನ ವ್ಯಕ್ತಿಯೋರ್ವ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ನೆಟ್ಟಗರು ಸಾಮಾಜಿಕ ಜಾಲತಾಣದಲ್ಲಿ ಆತನನ್ನು ಪತ್ತೆಹಚ್ಚಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ತಮಿಳುನಾಡಿನ ಸಂಸದ ಸಿಂಥಿಲ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ಹೀಗೆ ಟ್ವೀಟ್ ಮಾಡುವವರು ಮನುಷ್ಯರೇ ಅಲ್ಲ ಅವರನ್ನು ತಕ್ಷಣ ಬಂಧಿಸಿ ಎಂದು ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ನಟ ವಿಜಯ್ ಸೇತುಪತಿ, ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್‍ನಲ್ಲಿ ನಟಿಸುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ಕೂಡ ಸಿನಿಮಾ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು. ಆದರೆ ಸೋಮವಾರ ಸಿನಿಮಾದಿಂದ ನಟ ವಿಜಯ್ ಸೇತುಪತಿ ಹೊರ ನಡೆದಿದ್ದು, ಮುರಳೀಧರನ್ ಅವರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದರು.

ಮುರಳೀಧರನ್ ಬಯೋಪಿಕ್‍ನಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವುದು ಖಚಿತವಾಗುತ್ತಿದಂತೆ ತಮಿಳುನಾಡಿನಲ್ಲಿ ಹೊಸ ವಿವಾದ ಸೃಷ್ಟಿಯಾಗಿತ್ತು. 2009ರಲ್ಲಿ ಮುರಳೀಧರನ್ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖರ್ ವೈರಲ್ ಆಗಿತ್ತು. ಅಲ್ಲದೇ ಸಿನಿಮಾ ವಿರುದ್ಧ ಟ್ವಿಟ್ಟರಿನಲ್ಲಿ ಟ್ರೆಂಟ್ ಕೂಡ ಮಾಡಲಾಗಿತ್ತು. ವಿವಾದ ಬೆನ್ನಲ್ಲೇ ಮುತ್ತಯ್ಯ ಮುರಳೀಧರನ್ ಅವರ ಮನವಿಯ ಮೇರೆಗೆ ವಿಜಯ್ ಸೇತುಪತಿ ಸಿನಿಮಾದಿಂದ ಹೊರನಡೆದಿದ್ದಾರೆ. ತನ್ನ ಕಾರಣದಿಂದ ನಟ ವಿಜಯ್ ಸೇತುಪತಿ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎಂದು ಮುರಳೀಧರನ್ ಹೇಳಿದ್ದರು.

ಈ ಕುರಿತಂತೆ ಮುರಳೀಧರನ್ ತಮಿಳು ಭಾಷೆಯಲ್ಲೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬಯೋಪಿಕ್ `800′ ಕುರಿತಂತೆ ವಿವಾದಗಳು ಬಂದಿರುವುದರಿಂದ ನಾನು ಈ ಹೇಳಿಕೆ ನೀಡುತ್ತಿದ್ದೇನೆ. ತಪ್ಪು ಕಲ್ಪನೆಯಿಂದ ಹಲವರು ನಟ ವಿಜಯ್ ಸೇತುಪತಿ ಅವರನ್ನು ಚಿತ್ರದಿಂದ ದೂರ ಉಳಿಯುವಂತೆ ಒತ್ತಾಯಿಸಿದ್ದರು. ಅವರಿಗೆ ತೊಂದರೆಯಾಗಲು ನಾನು ಬಯಸುವುದಿಲ್ಲ. ಆದ್ದರಿಂದ ನಾನೇ ಅವರನ್ನು ಯೋಜನೆಯಿಂದ ಹೊರಗುಳಿಯುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದರು.

https://www.instagram.com/p/CGhU3FLJiSf/?utm_source=ig_embed

ಮುರಳೀಧರ್ ಹೇಳಿದ್ದು ಏನು?
2009ರ ಮೇನಲ್ಲಿ ಶ್ರೀಲಂಕಾದ ಸೇನೆ ಈಶಾನ್ಯ ಶ್ರೀಲಂಕಾದಲ್ಲಿ ವಾಸವಿದ್ದ ಅನೇಕ ಮಂದಿ ತಮಿಳಿಗರನ್ನು ಹೊಡೆದು ಹಾಕಿತ್ತು. ಅಂದು ಮುತ್ತಯ್ಯ ಮುರಳೀಧರನ್, ಇಂದು ನನಗೆ ಅತ್ಯಂತ ಸಂತೋಷದ ದಿನ ಎಂದು ಹೇಳಿದ್ದರು. ಈಗ ಈ ಕಾರಣಕ್ಕೆ ತಮಿಳುನಾಡಿನ ಕೆಲ ಚಿತ್ರ ಪ್ರೇಮಿಗಳು ಮತ್ತು ರಾಜಕಾರಣಿಗಳು ಸಾವಿರಾರು ತಮಿಳಿಗರು ಸತ್ತ ದಿನವನ್ನು ಸಂತೋಷದ ದಿನ ಎಂದಿದ್ದ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ತಮಿಳಿನ ನಟ ಅಭಿನಯಿಸುವುದು ಬೇಡ ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸ್ಪಷ್ಟ ನೀಡಿದ್ದ ಮುರಳೀಧರನ್, ಅಂದು ನಾನು ಹೇಳಿದ ಹೇಳಿಕೆಯನ್ನು ತಿರುಚಲಾಗಿದೆ. ಅಂದು ನಾನು ಅಮಾಯಕರು ಸತ್ತಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿರಲಿಲ್ಲ. ಸುಮಾರು ವರ್ಷದಿಂದ ನಡೆದುಕೊಂಡು ಬರುತ್ತಿದ್ದ ಯುದ್ಧ, ಘರ್ಷಣೆ ಇಲ್ಲಿಗೆ ಕೊನೆಯಾಗಿದೆ. ಅದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದೆ. ನಾನು ಎಂದು ಅಮಾಯಕರ ಕೊಲ್ಲುವುದನ್ನು ಬೆಂಬಲಿಸಿಲ್ಲ ಎಂದು ಮುತ್ತಯ್ಯ ಮುರಳೀಧರನ್ ಸ್ಪಷ್ಟಪಡಿಸಿದ್ದರು.

Comments

Leave a Reply

Your email address will not be published. Required fields are marked *