ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ನೇಣಿಗೆ ಶರಣು..?

– ಟಿಎಂಸಿ ಮೇಲೆ ಬಿಜೆಪಿ ನಾಯಕರು ಕಿಡಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಇದೀಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತ ಬಿಜೆಪಿ ಕಾರ್ಯಕರ್ತನನ್ನು ಉದಯ್ ದುಬೆ ಎಂದು ಗುರುತಿಸಲಾಗಿದೆ. ಇವರ ಮೃತದೇಹ ನಂದಿಗ್ರಾಮದ ಭೆಕುಟಿಯಾ ಪ್ರದೇಶದಲ್ಲಿರುವ ನಿವಾಸದಲ್ಲಿ ದೊರೆತಿದೆ. ಸದ್ಯ ಬಿಜಿಪಿ ನಾಯಕರು ಟಿಎಂಸಿ ಪಕ್ಷದೆವರ ಮೇಲೆ ಬೊಟ್ಟು ಮಾಡುತ್ತಿದ್ದು, ದುಬೆ ಸಾವಿಗೆ ಅವರೇ ಕಾರಣ ಎಂದು ಆರೋಪಿಸುತ್ತಿದ್ದಾರೆ.

ದುಬೆ ಇತ್ತೀಚೆಗೆ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ ಅವರು ಸುವೆಂದು ಅಧಿಕಾರಿ ಪರ ನಡೆಸಿದ್ದ ರೋಡ್ ಶೋ ದಲ್ಲಿ ಭಾಗಿಯಾಗಿದ್ದರು. ಆ ಬಳಿಕದಿಂದ ಅವರಿಗೆ ಹಲವಾರು ಬೆದರಿಕೆಗಳು ಬರಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಬಿಜೆಪಿ ನಾಯಕರು ತೃಣಮೂಲಕ ಕಾಂಗ್ರೆಸ್ ಕಾರ್ಯಕರ್ತರು(ಟಿಎಂಸಿ) ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ.

ಈ ಸಂಬಂಧ ಸುವೇಂದು ಅಧಿಕಾರಿ ಮಾತನಾಡಿ, ಸಮ್ಸಾಬಾದ್ ನ ಕಂಚನ್ ನಗರದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಇತ್ತ ನಂದಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಎರಡೂ ಘಟನೆಗಳ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಕ್ರಮ ಕೈಗೊಳ್ಳುತ್ತಾರೆ. ಒಟ್ಟಿನಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ದುಬೆ ಅವರನ್ನು ಟಿಎಂಸಿ ‘ಗೂಂಡಾಗಳು’ ಗಲ್ಲಿಗೇರಿಸಬಹುದೆಂದು ಬಿಜೆಪಿ ಹೇಳಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಆದರೆ ಟಿಎಂಸಿ ಮಾತ್ರ ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದೆ. ಅಲ್ಲದೆ ಬಿಜೆಪಿ ನಾಯಕರು ಸಾವಿನಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

ಇತ್ತ ಟಿಎಂಸಿಯ ಹಿರಿಯ ಮುಖಂಡರೊಬ್ಬರು, ಕೌಟುಂಬಿಕ ಕಲಹದಿಂದ ದುಬೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಮರಣೋತ್ತರ ವರದಿಯನ್ನು ಪಡೆದ ನಂತರ ನಿಖರವಾದ ಕಾರಣವನ್ನು ಕಂಡುಹಿಡಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸುವೆಂದು ಅಧಿಕಾರಿಯ ನಡುವಿನ ಹೈ-ವೋಲ್ಟೇಜ್ ಚುನಾವಣಾ ಸ್ಪರ್ಧೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಂದಿಗ್ರಾಮ್ ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

Comments

Leave a Reply

Your email address will not be published. Required fields are marked *