ಮನೆ ಕೆಲಸದವಳ ಮುಖವಾಡ ಧರಿಸಿ 8.60 ಲಕ್ಷ ರೂ. ಚಿನ್ನ ಕಳ್ಳತನ

– ಶ್ರೀಮಂತ ವೃದ್ಧೆಯರ ಮನೆಸೇರಿ ಕಳ್ಳತನ

ಹೈದರಾಬಾದ್: ವಯಸ್ಸಾದ ಮಹಿಳೆ ಇರುವ ಮನೆಗೆ ಕೆಲಸದವಳಾಗಿ ಸೇರಿಕೊಂಡು, 8.60 ಲಕ್ಷ ರೂ.ಗಳ 23 ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಮಹಿಳೆಯನ್ನು ಹೈದರಾಬಾದ್‍ನ ಅಮಲಾಪುರಂ ಪೊಲೀಸರು ಬಂಧಿಸಿದ್ದಾರೆ.

ಅನಂತಲಕ್ಷ್ಮಿ(80) ಅವರ ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳತನ ಮಾಡಿ ಪರಾರಿಯಾಗಿರುವ ಮಹಿಳೆಯನ್ನು ಮೇರಿ ಸುನೀತಾ(42)ಎಂದು ಗುರುತಿಸಲಾಗಿದೆ. ಈಕೆ ಗುಂಟೂರು ಜಿಲ್ಲೆಯ ನಿವಾಸಿ.

ಅಮಲಪುರಂ ಪ್ರದೇಶದಲ್ಲಿರುವ ಮನೆಯಲ್ಲಿ ವೃದ್ಧೆ ಅನಂತಲಕ್ಷ್ಮಿ ಒಂಟಿಯಾಗಿ ವಾಸಿಸುತ್ತಿದ್ದು, ಪಾಶ್ರ್ವವಾಯುವಿಗೆ ತುತ್ತಾಗಿದ್ದಳು. ಹೀಗಾಗಿ ಕೆಲಸಕ್ಕೆ ಓರ್ವ ಹೆಂಗಸನ್ನು ಮನೆಯಲ್ಲಿ ಇರಿಸಿಕೊಂಡಿದ್ದಳು. ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದ ಸುನೀತಾ, ಒಂದು ದಿನ ಮಧ್ಯರಾತ್ರಿ ಚಿನ್ನದ ಆಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದಾಳೆ. ವೃದ್ಧೆ ಮನೆಯಲ್ಲಿ ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಮೇರಿ ಸುನೀತಾ ಸೆಲ್ ಪೋನ್ ಸಂಖ್ಯೆಯನ್ನು ಆಧರಿಸಿ ಅವಳನ್ನು ಪತ್ತೆ ಮಾಡಲಾಗಿದೆ. ಈಕೆಯನ್ನು ಅಮಲಾಪುರಂನ ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 8.60 ಲಕ್ಷ ರೂಪಾಯಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಧವ ರೆಡ್ಡಿ ತಿಳಿಸಿದ್ದಾರೆ.

ಈ ಮೇರಿ ಸುನೀತಾ ಕಳೆದ ಕೆಲವು ವರ್ಷಗಳಿಂದ ಶ್ರೀಮಂತ ವೃದ್ಧೆಯರ ಮನೆಯಲ್ಲಿ ಕೆಲಸದ ಹೆಂಗಸಿನ ಮುಖವಾಡ ಧರಿಸಿ ಕೆಲಸಕ್ಕೆ ಸೇರಿ ಕಳ್ಳತನ ಮಾಡುತ್ತಿರುತ್ತಾಳೆ. ಈ ರೀತಿಯಾಗಿ ಆಕೆ ಹೈದರಾಬಾದ್‍ನಲ್ಲಿ 11 ಮತ್ತು ವಿಶಾಖಪಟ್ಟಣಂನಲ್ಲಿ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾಳೆ. ಈ 13 ಪ್ರಕರಣಗಳಲ್ಲಿ ಮೂರು ಪ್ರಕರಣಗಳಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *