ಮನೆಯ ಇಟ್ಟಿಗೆಗಳನ್ನೂ ತೆಗೆದುಕೊಂಡು ಹೋಗಲಿ – ಸಿಬಿಐ ದಾಳಿಗೆ ಡಿಕೆಶಿ ತಾಯಿ ಗರಂ

– ನನ್ನ ಮಗನನ್ನು ಕಂಡ್ರೆ ಅಧಿಕಾರಿಗಳಿಗೆ ಪ್ರೀತಿ

ರಾಮನಗರ: ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ಕೂಡ ತೆಗೆದುಕೊಂಡು ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹೇಳಿದ್ದಾರೆ.

ಮಗನ ಮನೆ ಮೇಲೆ ಸಿಬಿಐ ದಾಳಿ ಕುರಿತು ಕೋಡಿಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನನ್ನ ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ. ಅದಕ್ಕಾಗಿಯೇ ಪದೇ ಪದೇ ನಮ್ಮ ಮಗನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ ಸುಮ್ಮನೆ ತಿರುಗುತ್ತಾರೆ. ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಸಾಕು ಎಂದು ಹೇಳಿದರು.

ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಇಂದು ಐವರು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಇಂದು ಬೆಳಗ್ಗೆ 8 ಗಂಟೆಗೆ ಸಿಬಿಐ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದು, ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಡಿಕೆಶಿಗೆ ಸೇರಿದ ಹಲವು ಕಡೆಗಳಲ್ಲಿ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಡಿಕೆಶಿ ಮನೆಯಲ್ಲಿದ್ದ 50 ಲಕ್ಷ ಹಣ ಸೀಜ್?

ಕಳೆದ ವರ್ಷ ಸೆಪ್ಟೆಂಬರ್ 3ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಡಿಕೆಶಿ ಜೈಲು ಸೇರಿದ್ದರು. ಇದೀಗ ಒಂದು ವರ್ಷ ಕಳೆಯುವ ಬೆನ್ನಲ್ಲೇ ಮತ್ತೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಎಫ್‍ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮನೆಯ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *