ಮನೆಯಿಂದ ಅನಗತ್ಯವಾಗಿ ಹೊರಬಂದ್ರೆ ಹುಷಾರ್-ರಾಜ್ಯದಲ್ಲಿ ಮತ್ತಷ್ಟು ಟಫ್ ಆಗಲಿದೆ ‘ಲಾಕ್‍ಡೌನ್’

– ಮತ್ತಷ್ಟು ಬಿಗಿ ಕ್ರಮಕ್ಕೆ ಸರ್ಕಾರದಿಂದ ಆರ್ಡರ್

ಬೆಂಗಳೂರು: ಲಾಕ್‍ಡೌನ್ ಪ್ರಾರಂಭವಾದ ಮೊದಲ 2 ದಿನ ಸರ್ಕಾರಕ್ಕಿದ್ದ ಶೂರತನ ದಿನ ಕಳೆದಂತೆ ರಾಯರ ಕುದುರೆ ಕತ್ತೆಯಂತೆ ಆಯಿತು. ಇದೀಗ ಲಾಕ್‍ಡೌನ್ ಮುಗಿಯೋಕೆ ಮೂರು ದಿನ ಇರುವಾಗ ಮತ್ತೆ ಟಫ್ ರೂಲ್ಸ್ ಗೆ ಸರ್ಕಾರ ಮುಂದಾಗಿದೆ.

ಕೊರೊನಾ ಕಂಟ್ರೋಲ್‍ಗೆ ಕರ್ನಾಟಕದಲ್ಲಿ ಲಾಕ್‍ಡೌನ್ ಘೋಷಣೆಯಾಗಿ 12 ದಿನ ಕಳೆದಿದೆ. ಮೊದಲ 2 ದಿನ ಟಫ್ ಲಾಕ್‍ಡೌನ್ ನೋಡಿದ್ದ ರಾಜ್ಯ ನಂತರ ಈ ಲಾಕ್‍ಡೌನ್ ಆದೇಶ ಬರಬರುತ್ತಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿತ್ತು. ಮೊದಲು ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಏನೇ ತೆಗೆದುಕೊಳ್ಳಲು ನಡೆದುಕೊಂಡೇ ಹೋಗಬೇಕು ಎಂದಿದ್ದ ಸರ್ಕಾರ ನಂತರ ಆ ಆದೇಶವನ್ನು ತೆರವುಗೊಳಿಸ್ತು. ಇದರಿಂದ ವಾಹನಗಳು ರಸ್ತೆಗಿಳಿದ್ವು. ಜನ ಸಿಕ್ಕಿದ್ದೇ ಚಾನ್ಸ್ ಅಂತಾ ಅನಗತ್ಯವಾಗಿ ಓಡಾಡೋಕೆ ಶುರು ಮಾಡಿದ್ರು. ಇದರಿಂದ ಕೊರೋನಾ ಕೂಡ ರಣಕೇಕೆ ಹಾಕಿತು. ಇದೀಗ 14 ದಿನದ ಲಾಕ್‍ಡೌನ್ ಮುಗಿಯೋಕೆ ಇನ್ನು 3 ದಿನ ಎನ್ನುವಾಗ ಮತ್ತೆ ಟಫ್‍ರೂಲ್ಸ್ ಜಾರಿಗೆ ಸರ್ಕಾರ ಮುಂದಾಗಿದೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಬೆಂಗಳೂರಿನಲ್ಲಿ ಕಠಿಣ ರೂಲ್ಸ್ ಜಾರಿ ಮಾಡ್ಬೇಕು ಅಂತಾ ಪೊಲೀಸರಿಗೆ ಸೂಚನೆ ಕೊಟ್ಟಿದ್ರು. ಆ ಬಳಿಕ ಗೃಹಸಚಿವ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಟಫ್ ಮಾಡಲು ಸೂಚನೆ ಕೊಟ್ರು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಬೇಕು. ಅನಗತ್ಯ ಓಡಾಟಕ್ಕೆ ಲಗಾಮು ಹಾಕಬೇಕು. ವಾಹನ ಜಪ್ತಿ ಮಾಡಿ ಕೇಸ್ ದಾಖಲಿಸಿಕೊಳ್ಳುವಂತೆ ಆದೇಶಿಸಿದ್ರು.

ಗೃಹಸಚಿವರ ಸೂಚನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಪೊಲೀಸರು ಫೀಲ್ಡಿಗಿಳಿದ್ರು. ಲಾಕ್‍ಡೌನ್‍ನನು ಮತ್ತಷ್ಟು ಬಿಗಿಗೊಳಿಸಿದ್ರು. ಅನಗತ್ಯವಾಗಿ ಓಡಾಡ್ತಿದ್ದ ವಾಹನಗಳನ್ನು ಸೀಜ್ ಮಾಡಿದ್ರು. ಹಲವೆಡೆ ಸ್ವತಃ ಡಿಸಿಪಿಗಳೇ ಸಿಟಿ ರೌಂಡ್ ಹಾಕಿದ್ರು. ರಾಜಭವನ ರಸ್ತೆಯಲ್ಲೂ ಅನಾವಶ್ಯಕವಾಗಿ ಓಡಾಡ್ತಾ ಇರೋ ವೆಹಿಕಲ್‍ಗಳನ್ನ ಪೊಲೀಸ್ರು ಸೀಜ್ ಮಾಡಿದ್ರು. ಈ ವೇಳೆ ವಾಹನ ಸವಾರರು ಸೀಜ್ ಮಾಡಿರುವ ತಮ್ಮ ಬೈಕ್‍ಗಳನ್ನ ಬಿಡಿಸಿಕೊಳ್ಳಲು ಪರದಾಡಿದ್ರು. ವಿಜಯನಗರ ಟೋಲ್‍ಗೇಟ್ ಬಳಿ ಪೊಲೀಸರು ಫುಲ್ ಅಲರ್ಟ್ ಆಗಿದ್ರು. ಲಾಕ್‍ಡೌನ್ ಮಧ್ಯೆಯೂ ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನ ಮುಲಾಜಿಲ್ಲದೇ ಸೀಜ್ ಮಾಡಿದ್ರು.

ದೀಪಾಂಜಲಿ ನಗರ ಸರ್ಕಲ್‍ನಲ್ಲಿ ಬೈಕ್ ಸೀಜ್ ಮಾಡಿದ್ದಕ್ಕೆ ಬೈಕ್ ಸವಾರ ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ಅಣ್ಣ ಗಾಡಿ ಕೊಡು, ಹೆಂಡ್ತಿ ಗರ್ಭಿಣಿ.. ಪ್ಲೀಸ್ ಗಾಡಿ ಕೊಡಿ ಅಂತಾ ಪುಟ್ಟ ಮಗುವಿನ ಜೊತೆ ನಿಂತು ಕಣ್ಣೀರು ಹಾಕಿದ್ರು. ಹುಬ್ಬಳ್ಳಿಯಲ್ಲಿ ನಿಯಮ ಉಲ್ಲಂಘಿಸಿದ ಪೊಲೀಸರಿಗೆ ಪೊಲೀಸರೇ ದಂಡ ಹಾಕಿದ್ದಾರೆ. ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‍ನಲ್ಲಿ ಬೆಳಗಾವಿಯ ಕೆಎಸ್‍ಆರ್‍ಪಿ ಜೀಪ್‍ನಲ್ಲಿ ಅಂತರವಿಲ್ಲದೇ ಪೊಲೀಸರು ಪ್ರಯಾಣಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಇನ್ಸ್ ಪೆಕ್ಟರ್ ರವಿಚಂದ್ರ ದಂಡ ವಿಧಿಸಿದರು.

ಒಟ್ಟಿನಲ್ಲಿ ಸರ್ಕಾರ ಲಾಕ್‍ಡೌನ್ ಮತ್ತಷ್ಟು ಟಫ್‍ಗೊಳಿಸಿದೆ. ಪೊಲೀಸರು ವಾಹನಗಳನ್ನು ಸೀಜ್ ಮಾಡಿದ್ದಾರೆ. ಇಂದಿನಿಂದ ಅನಗತ್ಯವಾಗಿ ರಸ್ತೆಗಿಳಿಯೋ ಮುನ್ನ ಎಚ್ಚರವಾಗಿರಿ.

Comments

Leave a Reply

Your email address will not be published. Required fields are marked *