ಮನೆಯಲ್ಲೇ ಪತ್ನಿಯ ಪುತ್ಥಳಿ ಸ್ಥಾಪಿಸಿದ ಕೊಪ್ಪಳದ ಉದ್ಯಮಿ

ಕೊಪ್ಪಳ: ಆ ಮಹಿಳೆಗೆ ಹೀಗೆಯೇ ಮನೆಕಟ್ಟಿಸಬೇಕೆಂದು ಕನಸಿತ್ತು. ಮನೆ ನಿರ್ಮಾಣದ ಭೂಮಿ ಪೂಜೆಗೆ ಇದ್ದ ಆಕೆ ಮನೆಯ ಗೃಹ ಪ್ರವೇಶಕ್ಕೆ ಜೀವಂತವಾಗಿದ್ದಿಲ್ಲ. ಆದರೆ ಅದೇ ಮನೆಯಲ್ಲಿ ಜೀವಂತ ಪ್ರತಿಮೆಯಾಗಿದ್ದಳು. ಅರೇ ಇದೇನಪ್ಪ ಜೀವಂತ ಪ್ರತಿಮೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ಓದಿ.

ಒಂದೆಡೆ ಜೀವಂತ ಇರಬೇಕಾದಾಗಿನ ಫೋಟೋದಲ್ಲಿನ ಮಹಿಳೆ, ಇನ್ನೊಂದೆಡೆ ಮನೆಯಲ್ಲಿ ಜೀವಂತ ಇದ್ದಾರೇನೋ ಎನ್ನುವ ರೀತಿಯಲ್ಲಿ ಪ್ರತಿಮೆಯಾಗಿ ಕುಳಿತಿರುವ ಮಹಿಳೆ. ಮತ್ತೊಂದೆಡೆ ಮನೆಯೊಡತಿ ಜೊತೆ ಕುಳಿತಿರುವ ಪತಿ, ಮಕ್ಕಳು. ಇವೆಲ್ಲ ಕಂಡುಬಂದದ್ದು ಕೊಪ್ಪಳದಲ್ಲಿ. ಹೌದು. ಕೊಪ್ಪಳದ ಸಮೀಪದ ಭಾಗ್ಯನಗರದಲ್ಲಿನ ಉದ್ಯಮಿ ಶ್ರೀನಿವಾಸ್ ಗುಪ್ತಾರ ನೂತನ ಮನೆಯಲ್ಲಿ ವಿಶೇಷವಾದ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಪ್ರತಿಮೆ ಬೇರೆಯಾರದ್ದೂ ಅಲ್ಲ. ಸ್ವತಃ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆವಿಎನ್ ಮಾಧವಿ ಅವರದ್ದು.

ಕೆವಿಎನ್ ಮಾಧವಿ ಅವರಿಗೆ ತಮ್ಮ ಕನಸಿನ ಮನೆಯೊಂದನ್ನು ಕಟ್ಟಬೇಕೆಂದು ಆಸೆ ಇತ್ತು. ಅದರಂತೆ ಅವರು ಮನೆಯ ಭೂಮಿ ಪೂಜೆ ನೆರವೇರಿಸಿ, ಮನೆ ನಿರ್ಮಾಣ ಸಹ ಆರಂಭ ಮಾಡಿದ್ದರು. ಆದರೆ 2017ರ ಜುಲೈ 5 ರಂದು ತಿರುಪತಿಗೆ ಹೋಗುವ ವೇಳೆಯಲ್ಲಿ ಕೋಲಾರದ ಬಳಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಆ ಬಳಿಕ ಮನೆ ನಿರ್ಮಾಣದ ಕೆಲಸವನ್ನು ಶ್ರೀನಿವಾಸ್ ಗುಪ್ತಾ ಅರ್ಧಕ್ಕೆ ನಿಲ್ಲಿಸಿದ್ದರು. ನಂತರ ಮಕ್ಕಳ ಒತ್ತಾಯದ ಮೆರೆಗೆ ಮನೆ ನಿರ್ಮಾಣದ ಕೆಲಸವನ್ನು ಪುನಃ ಆರಂಭ ಮಾಡಿದರು.

ಈ ವೇಳೆಯಲ್ಲಿ ಮನೆಯ ನಿರ್ಮಾಣದ ಬಳಿಕ ಪತ್ನಿಯ ನೆನಪಿಗೆ ಏನಾದರೂ ಇರಲೇಬೇಕೆಂದು ನಿರ್ಧರಿಸಿದರು. ಮನೆಯ ಆರ್ಕಿಟೆಕ್ಟ್ ರಂಘಣ್ಣನವರ್ ಮೇಣದ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಬೆಂಗಳೂರಿನ ಶ್ರೀಧರಮೂರ್ತಿ ಅವರ ಗೊಂಬೆ ಮನೆಗೆ ಹೋದರು. ಅಲ್ಲಿ ಅವರು ಮೇಣದ ಪ್ರತಿಮೆ ಬದಲಾಗಿ ಸಿಲಿಕಾನ್ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಶ್ರೀಧರಮೂರ್ತಿ ಸಿಲಿಕಾನ್ ಮೆಟಿರಿಯಲ್ ನಲ್ಲಿ ಮಾಧವಿ ಅವರ ಪ್ರತಿಮೆ ಮಾಡಿದರು. ಈ ಹಿನ್ನಲೆಯಲ್ಲಿ ಇದೇ ಅಗಸ್ಟ್ ತಿಂಗಳ 8 ರಂದು ಶ್ರೀನಿವಾಸ್ ಅವರ ನೂತನ ಮನೆಯ ಗೃಹಪ್ರವೇಶವಾಗಿದ್ದ ಆ ಮನೆಯಲ್ಲಿ ತಮ್ಮ ಪತ್ನಿ ಕೆವಿಎನ್ ಮಾಧವಿಯ ಸಿಲಿಕಾನ್ ಪ್ರತಿಮೆಯನ್ನು ಇಟ್ಟಿದ್ದಾರೆ.

 

ಪತ್ನಿಯ ಸಿಲಿಕಾನ್ ಪ್ರತಿಮೆ ಹೇಗಿದೆ?
ಈ ಸಿಲಿಕಾನ್ ಪ್ರತಿಮೆಯನ್ನು ಮಾಡಲು ಶ್ರೀಧರ ಮೂರ್ತಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಮಯ ತೆಗೆದುಕೊಂಡಿದ್ದಾರೆ. ಈ ಸಿಲಿಕಾನ್ ಪ್ರತಿಮೆಗೆ ಜೀವ ಇಲ್ಲ ಎನ್ನುವುದನ್ನು ಒಂದು ಬಿಟ್ಟರೆ ಥೇಟ್ ಮಾಧವಿ ಅವರ ತರಹನೇ ಇದೆ. ಮಾಧವಿ ಅವರ ಸಿಲಿಕಾನ್ ಪ್ರತಿಮೆಯನ್ನು ಮನೆಯ ಹಾಲ್ ನಲ್ಲಿಟ್ಟಿದ್ದು, ಯಾರಾದರೂ ಮನೆಗೆ ಬಂದರೆ ಇವರನ್ನು ಮಾತನಾಡಿಸದೆ ಇರಲಾರರು. ಈ ಪ್ರತಿಮೆಯಲ್ಲಿ ಮಾಧವಿ ಅವರ ಉಡುತ್ತಿದ್ದ ಸೀರೆಯನ್ನೇ ಉಡಿಸಲಾಗಿದ್ದು, ಅವರು ತೊಡುತ್ತಿದ್ದ ಬಂಗಾರದ ಆಭರಣಗಳನ್ನು ಅವರ ಮೈಮೇಲೆ ಹಾಕಲಾಗಿದೆ. ಜೊತೆಗೆ ಅವರಂತೆಯೇ ಹೇರ್ ಸ್ಟೈಲ್ ಸಹ ಮಾಡಲಾಗಿದೆ. ಈ ಪ್ರತಿಮೆಯ ದೇಹದ ಭಾಗಗಳು ಫ್ಲೆಕ್ಸಿಬಲ್ ಆಗಿದ್ದು, ಮೇಕಪ್, ಸೀರೆ ಬದಲಾವಣೆ, ಹೆರ್ ಸ್ಟೈಲ್ ಸಹ ಚೇಂಜ್ ಮಾಡಬಹುದಾಗಿದ್ದು, ಎಲ್ಲಿಗೆ ಬೇಕಾದರೂ ಸಹ ಕ್ಯಾರಿ ಮಾಡಬಹುದಾಗಿದೆ.

ಮಾಧವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಈ ಪ್ರತಿಮೆ ಬಂದಾಗಿನಿಂದ ತಮ್ಮ ತಾಯಿ ಎಲ್ಲಿಗೂ ಹೋಗಿಲ್ಲ. ನಮ್ಮ ಜೊತೆಗೇನೆ ಇದ್ದಾರೆ ಎನ್ನುವ ಭಾವದಲ್ಲಿ ಇದ್ದಾರೆ. ಅಷ್ಟೇ ಅಲ್ಲ ತಮ್ಮ ತಾಯಿಯ ಪ್ರತಿಮೆಯ ಪಕ್ಕಕ್ಕೆ ಕುಳಿತು ಖುಷಿ ಪಡುತ್ತಾರೆ.

ಇಷ್ಟು ದಿನ ಸಾಕಷ್ಟು ಸೆಲೆಬ್ರೆಟಿ, ರಾಜಕಾರಣಿಗಳ ಕಂಚಿನ ಪ್ರತಿಮೆ, ಮೇಣದ ಪ್ರತಿಮೆಗಳನ್ನು ನಾವು ನೋಡಿದ್ದೇವೆ. ಅವು ಪ್ರತಿಮೆಗಳ ತರಹ ಕಾಣುತ್ತಿದ್ದವು. ಆದರೆ ಶ್ರೀನಿವಾಸ್ ಗುಪ್ತಾ ಅವರ ಪತ್ನಿ ಮಾಧವಿ ಅವರ ಪ್ರತಿಮೆ ಮಾತ್ರ ಯಾರಿಗೂ ಪ್ರತಿಮೆ ತರಹ ಕಾಣಲು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ಪತ್ನಿಯ ಕನಸಿನ ಮನೆಯಲ್ಲಿ ತಮ್ಮ ಕನಸಿನ ರಾಣಿಯ ಪ್ರತಿಮೆ ಇಡುವ ಮೂಲಕ ಶ್ರೀನಿವಾಸ್ ಗುಪ್ತಾ ತಮ್ಮ ಪತ್ನಿ ಮೇಲಿನ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಇವರ ಪ್ರೀತಿಗೆ ನಮ್ಮದೊಂದು ಹ್ಯಾಟ್ಸ್ ಆಫ್.

Comments

Leave a Reply

Your email address will not be published. Required fields are marked *