ಮನೆಯಲ್ಲಿ ವ್ಯಾಕ್ಸಿನ್ ಪಡೆದ್ರೆ ಏನು ತಪ್ಪು?: ಕೌರವ ಮೊಂಡುವಾದ

– ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಆಗ್ತಿತ್ತು
– ಸ್ವಾಮಿ ಕಾರ್ಯದ ಜೊತೆ ಸ್ವಕಾರ್ಯನೂ ಆಗ್ಬೇಕು ಅಲ್ವಾ?

ಹಾವೇರಿ: ಆಸ್ಪತ್ರೆಗೆ ಹೋಗಿದ್ದರೆ ಅರ್ಧ ಗಂಟೆ ಆಗ್ತಿತ್ತು. ಹಾಗಾಗಿ ಮನೆಗೆ ಆಸ್ಪತ್ರೆಯ ಸಿಬ್ಬಂದಿಯನ್ನ ಕರೆಸಿ ಪತ್ನಿ ಜೊತೆ ಲಸಿಕೆ ಪಡೆದಿದ್ದೇನೆ. ಮನೆಯಲ್ಲಿ ವ್ಯಾಕ್ಸಿನ್ ಪಡೆದ್ರೆ ತಪ್ಪೇನು ಎಂದು ಸಚಿವ ಬಿ.ಸಿ.ಪಾಟೀಲ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಮನೆಯಲ್ಲಿ ಲಸಿಕೆ ಪಡೆದ ವಿವಿಐಪಿ ಸಂಸ್ಕೃತಿಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಇವತ್ತು ನನ್ನನ್ನು ಭೇಟಿಯಾಗಲು ಹಲವು ಜನರು ಬಂದಿದ್ದರು. ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಕಾಯಬೇಕಾಗಿತ್ತು. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ಸಹ ಅಗಬೇಕು. ಆದ್ರೆ ಇದನ್ನು ವಿವಾದ ಅಂತ ಹೇಳಿದ್ರೆ ಏನು ಮಾಡಲು ಸಾಧ್ಯ. ವಿವಾದ ಅಂತ ಮಾಧ್ಯಮದವರು ಹೇಳಿದ್ರೆ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದೆ ಎಂದು ತಮ್ಮ ನಡೆಯನ್ನ ಸಮರ್ಥಿಸಿಕೊಂಡು ಹಾರಿಕೆಯ ಉತ್ತರ ನೀಡಿದರು.

ನಮಗೆ ಕೆಲವೊಂದು ವಿಶೇಷ ಸೌಲಭ್ಯಗಳಿರುತ್ತೇವೆ. ಆ ಸೌಲಭ್ಯ ಬಳಸಿ ವಿಶೇಷ ಅಧಿಕಾರದಿಂದ ವೈದ್ಯಕೀಯ ಸಿಬ್ಬಂದಿಯನ್ನ ಕರೆಸಿ ಲಸಿಕೆ ಪಡೆದುಕೊಂಡಿದ್ದೇನೆ. 15 ದಿನ ಪ್ರವಾಸದಲ್ಲಿದ್ದರಿಂದ ಇವತ್ತು ಕ್ಷೇತ್ರಕ್ಕೆ ಬಂದಿದ್ದರಿಂದು ಬಹಳ ಕೆಲಸ ಇತ್ತು. ನಾಳೆ ಮತ್ತೆ ಅಧಿವೇಶನಕ್ಕೆ ಹೋಗಬೇಕಿತ್ತು ಎಂದು ಹೇಳಿದರು.

ಆರೋಗ್ಯಾಧಿಕಾರಿಗಳ ಸಮರ್ಥನೆ: ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಹೆಚ್‍ಓ ರಾಜೇಂದ್ರ ದೊಡ್ಡಮನಿ, ಮನೆಯಲ್ಲಿ ಲಸಿಕೆ ಪಡೆಯಲು ಅವಕಾಶವಿಲ್ಲ. ಸಚಿವರು ಮನೆಯಲ್ಲಿ ಲಸಿಕೆ ಪಡೆದುಕೊಂಡಿರುವ ಮಾಹಿತಿ ನನಗಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದರು. ಇನ್ನು ಮನೆಗೆ ಸಿಬ್ಬಂದಿ ಕರೆಸಿ ಲಸಿಕೆ ಪಡೆದುಕೊಂಡ ನಡೆಯನ್ನ ಟಿಎಚ್‍ಓ ಡಾ. ಮಕಂದಾರ್ ಸಮರ್ಥಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಹೆಚ್ಚಿನ ಜನರು ಇರೋದರಿಂದ ಮನೆಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರ ಎಷ್ಟೋ ಜನ ಊರುಗೋಲು ಹಿಡಿದು, ವ್ಹೀಲ್ ಚೇರ್ ಮೇಲೆ ಕುಳಿತು ಗಂಟೆಗಟ್ಟಲೇ ಕಾದು ಲಸಿಕೆ ಪಡೆದಿದ್ದರು. ಸಚಿವರು ಲಸಿಕೆ ಪಡೆಯಲು ಆಸ್ಪತ್ರೆಗೆ ಬರದಷ್ಟು ದಣಿದಿದ್ದರಾ? ಲಸಿಕೆ ಏನು ಫುಡ್ ಡೆಲಿವರಿ ಅಂದುಕೊಂಡಿದ್ದೀರಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *