ಮನೆಗೆ ಹೋಗ್ತೀವಿ, ಹೋಂ ಕ್ವಾರಂಟೈನ್ ಮಾಡಿ ಅಂದ್ರೆ ಆಗಲ್ಲ- ಆರ್.ಅಶೋಕ್

– ದೆಹಲಿಯಿಂದ ಬಂದು ಕ್ವಾರಂಟೈನ್‍ಗೆ ಒಪ್ಪದವರಿಗೆ ಖಡಕ್ ಎಚ್ಚರಿಕೆ

ಬೆಂಗಳೂರು: ಮನೆಗೆ ಹೋಗ್ತೀವಿ, ಹೋಂ ಕ್ವಾರಂಟೈನ್ ಮಾಡಿ ಅಂದ್ರೆ ಆಗಲ್ಲ. ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕು ಎಂದು ಸಚಿವ ಆರ್.ಅಶೋಕ್ ಬೇರೆ ರಾಜ್ಯ, ದೇಶದಿಂದ ಬಂದವರಿಗೆ ಸೂಚಿಸಿದ್ದಾರೆ.

ದೆಹಲಿಯಿಂದ ಬಂದು ಕ್ವಾರಂಟೈನ್‍ಗೆ ಒಪ್ಪದ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಸರ್ಕಾರ ನಿಗದಿ ಮಾಡಿದ ರೀತಿ ಕ್ವಾರಂಟೈನ್ ಆಗಲೇಬೇಕು. ಮನೆಗೆ ಹೋಗುತ್ತೇವೆ ಎಂದು ಹೇಳಿದರೂ ನಡೆಯುವುದಿಲ್ಲ. ಒಂದು ವೇಳೆ ದೆಹಲಿಯಿಂದ ಬಂದವರನ್ನು ಮನೆಗೆ ಕಳುಹಿಸಿದರೆ ಕೊರೊನಾ ಜಾಸ್ತಿ ಆಗುವ ಸಾಧ್ಯತೆ ಇದೆ. ಹೀಗಾಗಿ ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕು ಎಂದು ತಿಳಿಸಿದರು. ಇದನ್ನೂ ಓದಿ: ‘ಕ್ವಾರಂಟೈನ್ ಆಗಲು ನಾವು ಇಲ್ಲಿ ಬರ್ಬೇಕಿತ್ತಾ’- ದಿಲ್ಲಿಯಿಂದ ಬಂದವ್ರ ಆಕ್ರೋಶ

ಕಳೆದ ವಾರ ನಡೆದ ಸಭೆಯಲ್ಲಿ ಇದನ್ನೇ ಫೈನಲ್ ಮಾಡಿದ್ದೇವೆ. ಫೈವ್ ಸ್ಟಾರ್, ತ್ರಿ ಸ್ಟಾರ್ ಸೇರಿದಂತೆ ಅಗತ್ಯಕ್ಕೆ ತಕ್ಕಂತೆ ಹೋಟೆಲ್ ರೆಡಿ ಮಾಡಿದ್ದೇವೆ. ಅವರ ಜೀವದ ಜೊತೆ, ಬೇರೆಯವರ ಜೀವ ಉಳಿಸುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯವಾಗಿದೆ. ಹೀಗಾಗಿ ಬೇರೆ ರಾಜ್ಯ, ವಿದೇಶಗಳಿಂದ ಬಂದಿರುವ ಎಲ್ಲರೂ ಕ್ವಾರಂಟೈನ್ ಆಗಲೇಬೇಕು ಎಂದು ಹೇಳಿದರು.

ರಂಜಾನ್ ಹಿನ್ನೆಲೆ ನಮಾಜ್ ಮಾಡಲು ಸಿಎಂ ಇಬ್ರಾಹಿಂ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಶ್ರೀರಾಮ ನವಮಿಗೆ ನಾವು ಅವಕಾಶ ಕೊಟ್ಟಿಲ್ಲ. ಪಾನಕ ಹಂಚಲೂ ನಾವು ಅವಕಾಶ ಕೊಟ್ಟಿರಲಿಲ್ಲ. ಯಾವುದೇ ಧರ್ಮ ಇರಲಿ ದೇಶದ ಕಾನೂನು ಎಲ್ಲರಿಗೂ ಒಂದೇ. ಕೇಂದ್ರ ಸರ್ಕಾರ ಅನುಮತಿ ಕೊಡುವವರೆಗೂ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಕೊಡುವುದಿಲ್ಲ. ಎಲ್ಲರೂ ಇದಕ್ಕೆ ಸಹಕಾರ ಕೊಡಬೇಕು ಎಂದರು. ಇದನ್ನೂ ಓದಿ: ಕೊರೊನಾ ಮಧ್ಯೆ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಲೆಟರ್ ಫೈಟ್

Comments

Leave a Reply

Your email address will not be published. Required fields are marked *