ಮಧ್ಯಪ್ರದೇಶದ ಸಚಿವೆಯನ್ನು ʼಐಟಂʼ ಎಂದ ಕಮಲ್‌ನಾಥ್‌

ಭೋಪಾಲ್: ಬಿಜೆಪಿಗೆ ಸೇರ್ಪಡೆಯಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ನಿಷ್ಠಾವಂತೆ ಮಧ್ಯಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವನರನ್ನು ಮಾಜಿ ಸಿಎಂ ಕಮಲ್‌ನಾಥ್ ʼಐಟಂʼ ಎಂದು ಕರೆದಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಿಂದ ಗ್ವಾಲಿಯರ್ ನ ದಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಇಮರ್ತಿ ದೇವಿ ಸದ್ಯ ಶಿವರಾಜ್‌ ಸಿಂಗ್‌ ಚೌಹಾಣ್‌ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

ನಿನ್ನೆ ದಬ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಅವರ ಪರ ಮತ ಯಾಚನೆ ಮಾಡುತ್ತಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ವ್ಯಕ್ತಿ ಆಗಿದ್ದು ಆಕೆಯಂಥಲ್ಲ. ಆಕೆಯ ಹೆಸರೇನು? ನಿಮಗೆಲ್ಲರಿಗೂ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ. ನೀವು ನನಗೆ ಮೊದಲೇ ಎಚ್ಚರಿಕೆ ನೀಡಬೇಕಾಗಿತ್ತು. ಎಂತಹ ʼಐಟಂʼ ಎಂದು ಕುಹಕವಾಡಿದ್ದಾರೆ.

ಕಮಲ್ ನಾಥ್ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ನಿಯೋಗ ಭೋಪಾಲ್ ನಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಕಮಲ್ ನಾಥ್ ಮಹಿಳೆ ಮತ್ತು ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ವಿಶೇಷ ಏನೆಂದರೆ ಕಮಲ್ ನಾಥ್ ಸರ್ಕಾರದಲ್ಲಿ ಕೂಡ ಇಮರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸುತ್ತಿದ್ದರು. ಏಳು ತಿಂಗಳ ಹಿಂದೆ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜೊತೆ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಮಲ್ ನಾಥ್ ಸರ್ಕಾರ ಪತನಗೊಂಡಿತ್ತು.

https://twitter.com/ShobhaBJP/status/1317839445576404998

Comments

Leave a Reply

Your email address will not be published. Required fields are marked *