ಮದ್ವೆಗೆ ನಿರಾಕರಿಸಿದ್ದಕ್ಕೆ ಸೇಡು – ಪ್ರಿಯತಮೆ ಹೆಸ್ರಲ್ಲಿ ಬಾಂಬ್ ಬೆದರಿಕೆ ಪತ್ರ ಬರೆದು ಸಿಕ್ಕಾಕ್ಕೊಂಡ!

ಮುಂಬೈ: ಸೌದಿ ಅರೇಬಿಯಾದ ರಾಯಭಾರಿ ಕಚೇರಿ ಮತ್ತು ವರ್ಸೋವಾದಲ್ಲಿನ ಶಾಲೆಗೆ ಬಾಂಬ್ ಹಾಕುವುದಾಗಿ ಪ್ರಿಯತಮೆಯ ಹೆಸರಿನಲ್ಲಿ ಬೆದರಿಕೆ ಪತ್ರ ಬರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಆರೋಪಿಗಳನ್ನು ಲೋಖಂಡ್ವಾಲಾ ನಿವಾಸಿ ಸುಜಿತ್ ರಾಮ್ ಗಿಡ್ವಾನಿ (47) ಎಂದು ಗುರುತಿಸಲಾಗಿದೆ. ಮದುವೆಯಾಗಲು ನಿರಾಕರಿಸಿದ ಮಹಿಳೆ ಹೆಸರಿನಲ್ಲಿ ಸುಜಿತ್ ಬೆದರಿಕೆ ಪತ್ರ ಬರೆಯುತ್ತಿದ್ದನು. ಈತ ಸೌದಿ ಅರೇಬಿಯಾದ ರಾಯಭಾರಿ ಕಚೇರಿ ಮತ್ತು ವರ್ಸೋವಾದಲ್ಲಿನ ಶಾಲೆಗೆ ಬಾಂಬ್ ಹಾಕುವುದಾಗಿ ಪತ್ರ ಬರೆದಿದ್ದು, ಇದೀಗ ಕಫ್ ಪೆರೇಡ್ ಪೊಲೀಸರು ಬಂಧಿಸಿದ್ದಾರೆ.

ಕಫೆ ಪೆರೇಡ್ ಪ್ರದೇಶದಿಂದ ಸೌದಿ ಅರೇಬಿಯನ್ ರಾಯಭಾರಿ ಕಚೇರಿಗೆ ಅಂಚೆ ಮೂಲಕ ಬೆದರಿಕೆ ಪತ್ರವೊಂದು ಬಂದಿದೆ. ಅದರಲ್ಲಿ ಕಟ್ಟಡವನ್ನು ಸ್ಫೋಟಿಸಲಾಗುವುದು ಎಂದು ಬರೆಯಲಾಗಿದೆ. ಹಾಗೆ ವರ್ಸೊವಾದಲ್ಲಿನ ಶಾಲೆಗೆ ಇಂಥದ್ದೇ ಪತ್ರ ಬಂದಿತ್ತು. ಬೆದರಿಕೆ ಪತ್ರ ಕಳುಹಿಸುತ್ತಿದ್ದ ವ್ಯಕ್ತಿ ಆತನ ಬದಲಿಗೆ ಮಹಿಳೆಯ ಹೆಸರು ಮತ್ತು ವಿಳಾಸವನ್ನು ಹಾಕಿ ಕಳುಹಿಸುತ್ತಿದ್ದನು.

ಪತ್ರದ ಬಗ್ಗೆ ಅಧಿಕಾರಿಗಳು ಕಫ್ ಪೆರೇಡ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ರಾಜ್‍ಕುಮಾರ್ ಡೊಂಗ್ರೆ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ತೌಸಿಫ್ ಮುಲ್ಲಾ ಮತ್ತು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್‍ಗಳಾದ ಸಂದೀಪ್ ಪೈಸ್ ಮತ್ತು ಡೊಂಗ್ರಿ ಪೊಲೀಸ್ ಠಾಣೆಯ ಪ್ರಕಾಶ್ ಲಿಂಗೆ ಅವರು ತನಿಖೆ ಆರಂಭಿಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.

ಪತ್ರದಲ್ಲಿ ಇರುವ ಹೆಸರು ಮತ್ತು ವಿಳಾಸವನ್ನು ಪತ್ತೆ ಹಚ್ಚಿ ಮಹಿಳೆಯನ್ನು ವಿಚಾರಣೆ ಮಾಡಿದ್ದಾರೆ. ಆ ವೇಳೆ ಪೊಲೀಸರಿಗೆ ಸುಜಿತ್ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಮಾಹಿತಿಯ ಆಧಾರದ ಮೇಲೆ ಸುಜಿತ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
ಅರೋಪಿ ಸುಜಿತ್ ತನ್ನ ತಾಯಿಯೊಂದಿಗೆ ಲೋಖಂಡ್ವಾಲಾದಲ್ಲಿ ವಾಸಿಸುತ್ತಿದ್ದಾನೆ. ವಿದ್ಯಾವಂತನಾಗಿದ್ದರೂ ಮದುವೆಗೆ ಹೆಣ್ಣು ಹುಡುಕಲು ಸಾಧ್ಯವಾಗಲಿಲ್ಲ. ಹೀಗಾಗಿ ಡೇಟಿಂಗ್ ಆ್ಯಪ್ ಮೂಲಕ ಸುಜಿತ್ ಮಹಿಳೆಯೊಬ್ಬಳನ್ನು ಭೇಟಿಯಾಗಿದ್ದನು. ಮಹಿಳೆಯನ್ನು ಮದುವೆಯಾಗಲು ಪ್ರಸ್ತಾಪಿಸಿದಾಗ ಈಕೆ ನಿರಾಕರಿಸಿದ್ದಾಳೆ. ನಂತರ ಸುಜಿತ್ ಮಹಿಳೆಗೆ ಪಾಠ ಕಲಿಸಲು ನಿರ್ಧರಿಸಿದ್ದಾನೆ. ನಂತರ ಮಹಿಳೆಯ ಹೆಸರಿನಲ್ಲಿ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದನು. ಆರೋಪಿಯ ಸಂಪೂರ್ಣ ವಿಚಾರಣೆಯ ನಂತರ ಮಹಿಳೆಯ ಮೇಲೆ ಸೇಡು ತೀರಿಸಿಕೊಳ್ಳಲು ಸುಜಿತ್ ಪೋಸ್ಟ್ ಬಾಕ್ಸ್‍ನಿಂದ ಪತ್ರವನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *