ಮದ್ಯಕ್ಕೆ ಹಣ ನೀಡದ ತಂದೆಯ ಕತ್ತು ಹಿಸುಕಿ ಪೆಟ್ಟಿಗೆಯಲ್ಲಿಟ್ಟ ಭೂಪ

– ತಾಯಿ ಮನೆಯಿಂದ ಹೊರಗೆ ಹೋಗಿದ್ದಾಗ ಕೊಂದ

ಲಕ್ನೋ: ಮದ್ಯ ಖರೀದಿಸಲು ಹಣ ನೀಡದ ತಂದೆಯನ್ನು ಸ್ವಂತ ಮಗನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕೊಲೆಯಾದ ತಂದೆಯನ್ನು 52 ವರ್ಷದ ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಮಹೇಂದ್ರ ಸಿಂಗ್ ಅವರ ಕಿರಿಯ ಮಗ ವಿಕ್ಕಿ ಎಣ್ಣೆ ಕುಡಿಯಲು ಹಣ ಕೊಟ್ಟಿಲ್ಲ ಎಂದು ತಂದೆಯ ಜೊತೆ ಜಗಳ ಮಾಡಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಮನೆಯಲ್ಲೇ ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದಾನೆ.

ಕೆಲಸದ ಮೇಲೆ ಹೊರಗೆ ಹೋಗಿದ್ದ ಮಹೇಂದ್ರ ಸಿಂಗ್ ಪತ್ನಿ ಭಾಗವತಿ ಮನೆಗೆ ಬಂದು ಪೆಟ್ಟೆಗೆಯನ್ನು ಓಪನ್ ಮಾಡಿ ನೋಡಿದಾಗ ಅಲ್ಲಿ ಪತಿಯ ಮೃತದೇಹ ಕಂಡಿದೆ. ನಂತರ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಗ ಅವರ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ವಿಕ್ಕಿಯನ್ನು ಬಂಧಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಎಸ್‍ಪಿ ಅಮಿತ್ ಆನಂದ್, ಕೊಲೆಯಾದ ಮಹೇಂದ್ರ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಬಂಟಿ ಮತ್ತು ಇನ್ನೊಬ್ಬ ವಿಕ್ಕಿ. ಇವರು ತರಕಾರಿ ವ್ಯಾಪಾರಿಗಳಾಗಿದ್ದಾರೆ. ಆರೋಪಿಯ ತಾಯಿ ಹೇಳುವ ಪ್ರಕಾರ ಹಿರಿಯ ಮಗ ಬಂಟಿ ತರಕಾರಿ ವ್ಯಾಪಾರಕ್ಕೆ ಹೊರಗೆ ಹೋದ ಸಮಯದಲ್ಲಿ ಕಿರಿಯ ಮಗನಾದ ವಿಕ್ಕಿ ಮದ್ಯ ಕುಡಿಯಲು ಹಣ ಕೇಳಿ ಅವರ ತಂದೆಯ ಜೊತೆ ಜಗಳ ಶುರು ಮಾಡಿದ್ದ ಎಂದು ಹೇಳಿದ್ದಾರೆ.

ಮಹೇಂದ್ರ ಸಿಂಗ್ ಎಷ್ಟೇ ಕೇಳಿದರೂ ಮದ್ಯ ಕುಡಿಯಲು ವಿಕ್ಕಿಗೆ ಹಣ ನೀಡಿಲ್ಲ. ಈ ಸಮಯದಲ್ಲೇ ಭಾಗವತಿ ಯಾವುದೋ ಕೆಲಸ ಮೇಲೆ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಕೋಪ ವಿಕೋಪಕ್ಕೆ ತಿರುಗಿ ತಂದೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ ವಿಕ್ಕಿ ಅವರ ಶವವನ್ನು ಪೆಟ್ಟಿಗೆ ಒಳಗೆ ಮುಚ್ಚಿಟ್ಟಿದ್ದಾನೆ. ಈ ಸಮಯದಲ್ಲಿ ಆರೋಪಿಯ ಪತ್ನಿ ಹಾಗೂ ಆತನ ನಾಲ್ಕು ವರ್ಷದ ಹೆಣ್ಣು ಮಗು ಮನೆಯಲ್ಲೇ ಇದ್ದರು ಎಂದು ಅಮಿತ್ ಆನಂದ್ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *