ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ – ಐವರು ಸಾವು

– ಮಹಿಳೆಯರು ಸೇರಿ ಹಲವಾರು ಆಸ್ಪತ್ರೆಗೆ ದಾಖಲು

ತಿರುವನಂತಪುರಂ: ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿ ಐವರು ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್‍ನಲ್ಲಿ ನಡೆದಿದೆ.

ಮೃತ ಐವರನ್ನು ರಾಮನ್ (61), ಅಯ್ಯಪ್ಪನ್ (55), ಅರುಣ್ (22), ಶಿವನ್ (45) ಮತ್ತು ಮೂರ್ತಿ (24) ಎಂದು ಗುರುತಿಸಲಾಗಿದೆ. ಈ ಐವರು ಪಯಾತುಕಾಡು ಪ್ರದೇಶದ ಬುಡಕಟ್ಟು ವಾಸಿಗಳಾಗಿದ್ದಾರೆ. ಮೃತರು ಒಂದೇ ಬುಡಕಟ್ಟು ಕಾಲೊನಿಯಲ್ಲಿ ವಾಸಿಸುತ್ತಿದ್ದರು, ಭಾನುವಾರ ಸಂಜೆ ಒಟ್ಟಿಗೆ ಮದ್ಯ ಸೇವಿಸಿ ಅಂದೇ ರಾತ್ರಿಯಲ್ಲಿ ಕುಸಿದು ಬಿದಿದ್ದಾರೆ.

ಈ ಐವರಲ್ಲಿ ಒಬ್ಬರು ಭಾನುವಾರ ರಾತ್ರಿಯೇ ನಿಧನರಾಗಿದ್ದರೆ, ಉಳಿದ ನಾಲ್ವರು ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತರು ನಿರಂತರವಾಗಿ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇವರ ಜೊತೆ ಮದ್ಯ ಸೇವಿಸಿದ ಮಹಿಳೆಯರೂ ಸೇರಿದಂತೆ ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರನ್ನು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸರು, ಬುಡಕಟ್ಟು ಕಾಲೋನಿಯಲ್ಲಿ ವಾಸಿಸುವ ಜನರೆಲ್ಲರೂ ಒಂದೇ ಮದ್ಯ ಸೇವಿಸಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇಂದು ಸಂಜೆ ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯ ವರದಿ ಬರಲಿದ್ದು, ಅದರಲ್ಲಿ ಸಾವಿಗೆ ನಿಖರ ಕಾರಣ ಯಾವುದು ಎಂಬುದನ್ನು ಖಚಿತ ಪಡಿಸಿಕೊಂಡು ತಿಳಿಸುತ್ತೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *