ಮದುವೆಗೆ ಬಟ್ಟೆ ತರ್ತೇನೆಂದು ಹೋಗಿ ಪ್ರಿಯಕರನೊಂದಿಗೆ ನೇಣಿಗೆ ಶರಣು

– ನವೆಂಬರ್ 30ಕ್ಕೆ ಫಿಕ್ಸ್ ಆಗಿದ್ದ ವಿವಾಹ

ಜೈಪುರ: ಯುವತಿ ಹಾಗೂ ಆಕೆಯ ಪ್ರಿಯತಮ ಇಬ್ಬರೂ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ.

ರಾಜಸ್ಥಾನದ ಜೋದ್‍ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಇಬ್ಬರೂ ಸಂಬಂಧ ಹೊಂದಿದ್ದರು ಆದರೆ ಕುಟುಂಬದವರು ವಿವಾಹ ನಿಶ್ಚಯಿಸಿದ್ದರು. ಹೀಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಂಡೋರ್ ಪ್ರದೇಶದ ಯುವತಿಯ ವಿವಾಹವನ್ನು ನವೆಂಬರ್ 30ಕ್ಕೆ ಫಿಕ್ಸ್ ಮಾಡಲಾಗಿತ್ತು. ಬಟ್ಟೆ ತರುವುದಾಗಿ ಯುವತಿ ಗುರುವಾರ ಮಧ್ಯಾಹ್ನ ಮನೆಯಿಂದ ಹಿರಟಿದ್ದು, ರಾತ್ರಿಯಾದರೂ ಮನೆಗೆ ಮರಳಿಲ್ಲ. ಇದರಿಂದ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಯುವತಿಯ ತಂದೆ ಮನೆಯ ಹತ್ತಿರವಿರುವ ಯುವಕ ಜೀತು ವಿರುದ್ಧ ಅಪಹರಣದ ದೂರು ದಾಖಲಿಸಿದ್ದಾರೆ. ಅಲ್ಲದೆ ನನ್ನ ಮಗಳು ಅಪ್ರಾಪ್ತೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ಗುರುವಾರ ಮಧ್ಯರಾತ್ರಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಜೋಡಿ ನಿಂಬಾರಿ ಪ್ರದೇಶದಲ್ಲಿ ಮರಕ್ಕೆ ನೇಣುಬಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದಿದೆ. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಇಬ್ಬರ ದೇಹವನ್ನು ಗುರುತಿಸಿದ್ದಾರೆ.

ಇದೀಗ ಯುವತಿಯ ಕುಟುಂಬಸ್ಥರು ಗೋಳಾಡುತ್ತಿದ್ದು, ತಮ್ಮ ಮಗಳು ಇನ್ನೂ ಅಪ್ರಾಪ್ತೆ ಎಂದಿದ್ದಾರೆ. ಆದರೆ ಆಧಾರ್ ಕಾರ್ಡ್ ದಾಖಲೆ ಪ್ರಕಾರ ಯುವತಿಗೆ 18 ವರ್ಷವಾಗಿದೆ. ಅವಳ ವಯಸ್ಸಿನ ಕುರಿತು ಶಾಲೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನಗೂಲಿ ನೌಕರನಾಗಿದ್ದ ಯುವಕ ಹಲವು ದಿನಗಳಿಂದ ಯುವತಿ ಜೊತೆ ಸಂಬಂಧ ಹೊಂದಿದ್ದ. ಅಲ್ಲದೆ ಯುವತಿಯ ಮನೆ ಎದುರಿನ ಮೊಹಲ್ಲಾದಲ್ಲಿ ವಾಸಿಸುತ್ತಿದ್ದ. ಮರಣೋತ್ತರ ಪರೀಕ್ಷೆ ಬಳಿಕ ಇಬ್ಬರ ದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಅವರ ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *