ಮದುವೆಗೆ ಒತ್ತಡ – ಮನೆ ಬಿಟ್ಟು ಬಂದು 7 ವರ್ಷದ ನಂತ್ರ ಯುವತಿ ಸಾಧನೆ

– ಪಾರ್ಟ್ ಟೈಂ ಕೆಲಸ ಮಾಡುತ್ತಾ ವಿದ್ಯಾಭ್ಯಾಸ
– ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಯಲ್ಲಿ ಉತ್ತೀರ್ಣ

ಲಕ್ನೋ: ಮನೆಯಲ್ಲಿ ಮದುವೆ ಮಾಡಿಕೊಳ್ಳಲು ಒತ್ತಡ ಹಾಕುತ್ತಿದ್ದಂತೆ ಯುವತಿಯೊಬ್ಬಳು ಮನೆ ಬಿಟ್ಟು ಬಂದಿದ್ದು, ಏಳು ವರ್ಷದ ನಂತರ ಯುವತಿ ರಾಜ್ಯ ಲೋಕಸೇವಾ ಆಯೋಗದ (ಪಿಎಸ್‍ಸಿ) ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮೀರತ್ ನಿವಾಸಿ ಸಂಜು ರಾಣಿ ವರ್ಮಾ ಮನೆ ಬಿಟ್ಟು ಬಂದು ಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 2013ರಲ್ಲಿ ಸಂಜು ತಾಯಿ ಅನಾರೋಗ್ಯದಿಂದ ನಿಧನರಾದರು. ಕೆಲವು ದಿನಗಳ ನಂತರ ಕುಟುಂಬದವರು ಮದುವೆ ಮಾಡಿಕೊಳ್ಳುವಂತೆ ಒತ್ತಡ ಹಾಕಲು ಪ್ರಾರಂಭಿಸಿದ್ದರು. ಹೀಗಾಗಿ ಮನೆ ಬಿಟ್ಟು ಬಂದು ಜೀವನದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ್ದಾರೆ.

ಸಂಜು ರಾಣಿ ಮೀರತ್ ಜಿಲ್ಲೆಯ ಆರ್.ಜಿ ಪದವಿ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಓದುತ್ತಿದ್ದರು. ಕುಟುಂಬದವರು ಸಂಜುಗೆ ಮದುವೆ ಮಾಡಬೇಕೆಂದು ನಿರ್ಧರಿಸಿದ್ದರು. ಆದರೆ ಸಂಜುಗೆ ಮೊದಲು ತನ್ನ ವೃತ್ತಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಕನಸು ಕಂಡಿದ್ದರು. ಕೊನೆಗೆ ಕುಟುಂಬಕ್ಕಿಂತ ತನ್ನ ಗುರಿ ಮುಖ್ಯ ಎಂದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಮತ್ತು ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗಲು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು.

ಅದರಂತೆಯೇ ಮನೆ ಬಿಟ್ಟು ಬಂದು ಏಳು ವರ್ಷಗಳ ನಂತರ ಸಂಜು ರಾಣಿ ವಾಣಿಜ್ಯ ಸೇವಾ ಅಧಿಕಾರಿಯಾಗಲು ಸಾರ್ವಜನಿಕ ಸೇವಾ ಆಯೋಗದ (ಪಿಎಸ್‍ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರ ಫಲಿತಾಂಶ ಕಳೆದ ವಾರ ಬಂದಿತ್ತು.

“2013ರಲ್ಲಿ ನಾನು ಮನೆ ಬಿಟ್ಟು ಮಾತ್ರ ಬಂದಿಲ್ಲ. ನನ್ನ ಪಿಜಿ ಕೋರ್ಸ್ ಅನ್ನು ನಿಲ್ಲಿಸಿದೆ. ಆಗ ನನ್ನ ಬಳಿ ಹಣ ಕೂಡ ಇರಲಿಲ್ಲ. ಕೊನೆಗೆ ಒಂದು ಬಾಡಿಗೆ ರೂಮ್ ತೆಗೆದುಕೊಂಡು ಮಕ್ಕಳಿಗೆ ಟ್ಯೂಷನ್ ಮಾಡಲು ಪ್ರಾರಂಭಿಸಿದೆ. ನಂತರ ನನಗೆ ಖಾಸಗಿ ಶಾಲೆಯಲ್ಲಿ ಪಾರ್ಟ್ ಟೈಂ ಶಿಕ್ಷಕಿ ಆಗಿ ಕೆಲಸ ಸಿಕ್ಕಿತು. ಆಗ ನಾನು ನಾಗರಿಕ ಸೇವಾ ಪರೀಕ್ಷೆಗಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿದೆ ” ಎಂದು ತಾನು ನಡೆದು ಬಂದು ಹಾದಿಯ ಬಗ್ಗೆ ತಿಳಿಸಿದ್ದಾರೆ.

ನಾನು ಸಾಧಿಸುವುದು ಇನ್ನೂ ಇದೆ. ಯುಪಿಎಸ್‍ಪಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು. ಯಾಕೆಂದರೆ ನಾನು ಜಿಲ್ಲಾಧಿಕಾರಿಯಾಗಬೇಕೆಂದು ಕನಸು ಕಂಡಿದ್ದೇವೆ ಎಂದು ತಮ್ಮ ಗುರಿಯ ಬಗ್ಗೆ ಹೇಳಿಸಿದ್ದಾರೆ. ಸಂಜು ಸಾಧನೆಗೆ ಆಕೆಯ ಕುಟುಂಬದವರು ಬೆಂಬಲ ನೀಡಿಲ್ಲ. ಆದರೂ ಛಲಬಿಡದೆ ವ್ಯಾಸಂಗ ಮಾಡಿ ಸಾಧನೆ ಮಾಡಿದ್ದಾರೆ. ಶೀಘ್ರವೇ ಅವರು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಲಿದ್ದಾರೆ.

Comments

Leave a Reply

Your email address will not be published. Required fields are marked *