ಮತ್ತೊಮ್ಮೆ ಭೂಗತ ಲೋಕದ ದರ್ಶನ ಮಾಡಿಸಲಿದ್ದಾರೆ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ- ಸೆಟ್ಟೇರಿದ ‘ಎಂಆರ್’ ಸಿನಿಮಾ

ಬೆಂಗಳೂರು: ಕೊನೆಗೂ ಮುತ್ತಪ್ಪ ರೈ ಜೀವನ ಕಥೆಯಾಧಾರಿತ ಸಿನಿಮಾ ಸೆಟ್ಟೇರಿದೆ. ಹೌದು, ಮುತ್ತಪ್ಪ ರೈ ಬದುಕಿರುವಾಗಲೇ ಅವರ ಬದುಕನ್ನು ತೆರೆ ಮೇಲೆ ತರುವ ಪ್ರಯತ್ನಗಳು ನಡೆದಿತ್ತು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ರೈ ಜೀವನವನ್ನು ತೆರೆ ಮೇಲೆ ತರುವ ಬಗ್ಗೆ ಮಾತನಾಡಿದ್ದರು. ಆದರೆ ಸಾಧ್ಯವಾಗರಲಿಲ್ಲ. ಇದೀಗ ಸ್ಯಾಂಡಲ್‍ವುಡ್ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ಮುತ್ತಪ್ಪ ರೈ ಬದುಕಿನ ಕಥೆಯನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ.

ಚಿತ್ರಕ್ಕೆ ‘ಎಂಆರ್’ ಎಂದು ಟೈಟಲ್ ಫಿಕ್ಸ್ ಆಗಿದೆ. ರೈ ಬದುಕಿನ ಚಿತ್ರಣ ಮೂರು ಹಂತಗಳಲ್ಲಿ ತೆರೆ ಮೇಲೆ ತರಲು ರವಿ ಶ್ರೀವತ್ಸ ಪ್ಲ್ಯಾನ್ ಮಾಡಿಕೊಂಡಿದ್ದು, ಅದಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ರೈ ಬದುಕನ್ನು ಅಧ್ಯಯನ ಮಾಡಿರುವ ನಿರ್ದೇಶಕರು, ಇದೀಗ ಅದನ್ನು ಬೆಳ್ಳಿ ಪರೆದೆ ಮೇಲೆ ತರುತ್ತಿದ್ದಾರೆ.

‘ಎಂಆರ್’ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದ್ದು, ಮುತ್ತಪ್ಪ ರೈ ಪಾತ್ರದಲ್ಲಿ ಹೊಸ ಪ್ರತಿಭೆ ದೀಕ್ಷಿತ್ ಮಿಂಚುತ್ತಿದ್ದಾರೆ. ರವಿ ಶ್ರೀವತ್ಸ ಅವರ ಡೆಡ್ಲಿ ಸೋಮ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ದೀಕ್ಷಿತ್ ಇದೀಗ ಅದೇ ನಿರ್ದೇಶಕರ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಭೂಗತ ಲೋಕದ ಕ್ರೈಂ ಸ್ಟೋರಿ ಜೊತೆಗೆ ಪ್ರೇಮ್ ಕಹಾನಿಯೂ ಸಿನಿಮಾದಲ್ಲಿದ್ದು, ಮಲಯಾಳಂ ಮೂಲದ ನಟಿ ಸೌಮ್ಯ ಮೆನನ್ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

ಸೌಭಾಗ್ಯ ಲಕ್ಷ್ಮೀ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಎಂಆರ್’ ಚಿತ್ರಕ್ಕೆ ಡೆಡ್ಲಿ ಸೋಮ ಚಿತ್ರಕ್ಕೆ ಬಂಡವಾಳ ಹೂಡಿದ್ದ ಶೋಭ ರಾಜಣ್ಣ ನಿರ್ಮಾಪಕ. ಗುರುಕಿರಣ್ ಸಂಗೀತ ಸಾರಥ್ಯದಲ್ಲಿ ‘ಎಂಆರ್’ ಚಿತ್ರದ ಹಾಡುಗಳು ಮೂಡಿ ಬರಲಿದೆ. ಸದ್ಯ ಮುಹೂರ್ತ ಆಚರಿಸಿಕೊಂಡಿರುವ ಚಿತ್ರತಂಡ, ಹೊಸ ವರ್ಷಕ್ಕೆ ಶೂಟಿಂಗ್ ಆರಂಭಿಸಲಿದ್ದು, ಆಗಸ್ಟ್ ತಿಂಗಳಿನಲ್ಲಿ ಚಿತ್ರದ ಮೊದಲ ಭಾಗವನ್ನು ತೆರೆ ಮೇಲೆ ತರುವ ಪ್ಲ್ಯಾನ್ ಮಾಡಿಕೊಂಡಿದೆ.

Comments

Leave a Reply

Your email address will not be published. Required fields are marked *