ಮತ್ತೆ ತಮಿಳುನಾಡು ಕಾವೇರಿ ಕ್ಯಾತೆ – ಕರ್ನಾಟಕ ರಣಧೀರ ಪಡೆಯಿಂದ ಎಚ್ಚರಿಕೆ

ಬೆಂಗಳೂರು: ತಮಿಳುನಾಡು ಸರ್ಕಾರ ಕೈಗೊಂಡಿರುವ ಕಾವೇರಿ ನದಿ ತಿರುವು ಯೋಜನೆಗೆ ಈಗ ಕನ್ನಡಿಗರು ಸಿಡಿದೆದ್ದಿದ್ದಾರೆ.

ಕರ್ನಾಟಕ ಸರ್ಕಾರವೂ ಅಡ್ಡಗೋಡೆ ಮೇಲೆ ದೀಪವಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸದೇ ಈ ಯೋಜನೆಯನ್ನು ಸ್ಪಷ್ಟವಾಗಿ ವಿರೋಧಿಸಬೇಕು ಅಂತ ಹರೀಶ್ ಕುಮಾರ್ ನೇತೃತ್ವದ ಕರ್ನಾಟಕ ರಣಧೀರ ಪಡೆ ಎಚ್ಚರಿಸಿದೆ.

ಕಾವೇರಿ, ವೈಗೈ ಹಾಗೂ ಗುಂಡರ್ ನದಿಗಳನ್ನು ಜೋಡಿಸುವ 14,400 ಕೋಟಿ ವೆಚ್ಚದ ಯೋಜನೆಯ ಮೊದಲ ಹಂತದ ಕಾಮಗಾರಿಗೆ ತಮಿಳುನಾಡು ಸರ್ಕಾರ ಈಗಾಗಲೇ ಭೂಮಿ ಪೂಜೆ ನಡೆಸಿದೆ. ಇದು ತಮಿಳುನಾಡಿನ ದಕ್ಷಿಣ ಭಾಗಕ್ಕೆ 6,000 ಘನ ಅಡಿಗಳಷ್ಟು ಹೆಚ್ಚುವರಿ ನೀರನ್ನು ಈ ಯೋಜನೆಯಡಿ ತಿರುಗಿಸಿ ಹರಿಸುತ್ತದೆ ಎಂದು ಹೇಳಲಾಗಿದೆ. ಇದು ಕರ್ನಾಟಕದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

ಈಗಾಗಲೇ ಈ ಸಂಬಂಧ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿಯವರು ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿರುವುದು ಸ್ವಾಗತಾರ್ಹ. ಆದರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಲು ನಿರ್ಧರಿಸಿರುವ ರೀತಿಯ ಬಗ್ಗೆ ಕರ್ನಾಟಕ ರಣಧೀರ ಪಡೆ ಸೇರಿದಂತೆ ಕನ್ನಡ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದೆ. ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಬಳಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ರೂಪಿಸಿರುವ ನದಿ ಜೋಡಣೆ ಯೋಜನೆಯು ರಾಜ್ಯದ ರೈತರ ಹಿತಾಸಕ್ತಿಗೆ ಮಾರಕವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಈಗಾಗಲೇ ಕಾವೇರಿ ನೀರು ಹಂಚಿಕೆ ವಿವಾದದಲ್ಲಿದೆ. ಹಂಚಿಕೆಯಾದ ನೀರಿನ ಬಗ್ಗೆ ತಮಿಳುನಾಡು ಪದೇ ಪದೇ ತಕರಾರು ತೆಗೆಯುತ್ತಿದೆ. ಮತ್ತೆ ನದಿ ತಿರುವಿನ ಮೂಲಕ ಹೆಚ್ಚುವರಿ ನೀರು ಪೂರೈಕೆಗೆ ತಮಿಳುನಾಡು ಕಾವೇರಿಯನ್ನೇ ಗುರಿಯಾಗಿರಿಸಿಕೊಂಡರೆ ಅದರ ನೇರ ಪರಿಣಾಮ ಕರ್ನಾಟಕದ ಮೇಲಾಗುತ್ತದೆ. ತಮಿಳುನಾಡಿನಲ್ಲಿ ಕಾವೇರಿ ನದಿ ಅವಲಂಬನೆ ಪ್ರದೇಶಗಳು ವಿಸ್ತಾರಗೊಂಡಂತೆ ನೀರಿನ ಬೇಡಿಕೆಯೂ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಕಾವೇರಿ, ವೈಗೈ ಹಾಗೂ ಗುಂಡರ್ ನದಿಗಳನ್ನು ಜೋಡಿಸುವ ಕಾಮಗಾರಿಗೆ ಕೇಂದ್ರ ತಡೆ ನೀಡಬೇಕು ಎಂದು ಕರ್ನಾಟಕ ರಣಧೀರಪಡೆ ಆಗ್ರಹಿಸಿದೆ.

ಇದೇ ಆಗ್ರಹವನ್ನು ರಾಜ್ಯ ಸರ್ಕಾರವೂ ಕೇಂದ್ರದ ಮುಂದೆ ಸ್ಪಷ್ಟವಾಗಿ ಮಂಡಿಸಬೇಕು ಅಂತ ಕರ್ನಾಟಕ ರಣಧೀರಪಡೆ ರಾಜ್ಯಾಧ್ಯಕ್ಷ ಬಿ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *