ಮತ್ತೆ ಕೊರೊನಾ ಹಿಟ್‌ಲಿಸ್ಟ್‌ನಲ್ಲಿ ಬೆಂಗಳೂರು!

– ಹೊಸ ಏರಿಯಾಗಳಿಗೆ ಕಾಲಿಟ್ಟ ವೈರಸ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗ್ತಾ ಇದೆ. ಬುಧವಾರವಂತೂ ಕೊರೋನಾ ಸ್ಫೋಟವಾಗಿದೆ. ರಾಜ್ಯದ ಜಿಲ್ಲೆಗಳಿಗಿಂತ ಅತಿ ಹೆಚ್ಚು ಕೇಸ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಬರೋಬ್ಬರಿ 42 ಕೇಸ್ ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೊನಾ ಓಟ ಹೆಚ್ಚಾಗಿದೆ. ನಿನ್ನೆ ದಾಖಲೆಯ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ಈ ಮೂಲಕ ಸಿಲಿಕಾನ್ ಸಿಟಿ ಮತ್ತೆ ಕೊರೋನಾ ಹಿಟ್‍ಲಿಸ್ಟ್ ನಲ್ಲಿದೆ ಎಂಬುದು ಸಾಬೀತಾಗಿದೆ. ಕುವೈತ್‍ನಿಂದ ಬಂದು ಕ್ವಾರಂಟೈನ್ ಆಗಿದ್ದ ಮತ್ತೆ ಐವರಿಗೆ ಸೋಂಕು ತಟ್ಟಿದೆ. ಮಹಾರಾಷ್ಟ್ರದಿಂದ ರಾಜಧಾನಿಗೆ ಬಂದಿದ್ದ 9 ಮಂದಿಯಲ್ಲೂ ಕೊರೊನಾ ದೃಢವಾಗಿದೆ. ನಿನ್ನೆ ಪತ್ತೆಯಾದ ಸೋಂಕಿತರಲ್ಲಿ ಅತಿ ಹೆಚ್ಚು ಉಸಿರಾಟದ ಸಮಸ್ಯೆ, ನೆಗಡಿ , ಶೀತ ಮತ್ತು ಜ್ವರ ಕಾಣಿಸಿಕೊಂಡಿದೆ.

ಅತಿ ಹೆಚ್ಚು ಜನ ಸಂಪರ್ಕದಲ್ಲಿರುವವರಿಗೆ ಕೊರೊನಾ ತಟ್ಟಿರುವುದು ಬೆಂಗಳೂರಿಗರ ನಿದ್ದೆಗೆಡಿಸಿದೆ. ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರಿಗೆ ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಡಾಕ್ಟರ್ ಸಂಪರ್ಕದಲ್ಲಿದ್ದವರಿಗೆ ಆತಂಕ ಹೆಚ್ಚಾಗಿದೆ. ಜನನಿಬಿಡ ಪ್ರದೇಶವಾದ ಅವೆನ್ಯೂ ರೋಡಿನಲ್ಲಿ ಹೂ ಮಾರುತ್ತಿದ್ದ ಮಹಿಳೆಗೂ ಸೋಂಕು ಬಂದಿದೆ. ಹೂವಿನ ಜೊತೆ ಮಹಿಳೆ ಎಷ್ಟು ಜನಕ್ಕೆ ಸೋಂಕು ಹಂಚಿದ್ದಾಳೋ ಎಂಬ ಸಂಗತಿ ಆರೋಗ್ಯ ಇಲಾಖೆಯ ನಿದ್ರೆಗೆಡಿಸಿದೆ. ಜೊತೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ರೋಗಿಗೂ ಸೊಂಕು ಬಂದಿದ್ದು. ಈ ಕೇಸ್‍ಗಳು ಜನರನ್ನ ಮತ್ತಷ್ಟು ಆತಂಕಕ್ಕೆ ದೂಡುತ್ತಿವೆ.

ಬೆಂಗಳೂರಿನ ಹೊಸ ಏರಿಯಾಗಳಾದ ಹನುಮಂತನಗರ, ಬಾಗಲಗುಂಟೆ, ಡಿಜೆ ಹಳ್ಳಿಯ ಟ್ಯಾಂಕ್ ಮೊಹಲ್ಲಾ ರೋಡ್‍ನಲ್ಲಿ ಸೊಂಕು ಪತ್ತೆಯಾಗಿದೆ. ಎಸ್ ಜೆ ಗಾರ್ಡನ್ ಸೊಂಕಿತ ಮಹಿಳೆಯ ಸಂಬಂಧ ಪ್ರಾಥಮಿಕ ಸಂಪರ್ಕದಲ್ಲಿದ್ದವರಲ್ಲಿ ಇಬ್ಬರಿಗೆ ಸೋಂಕು ತಟ್ಟಿದೆ. ಆನೇಕಲ್‍ನಲ್ಲಿ ಮೂರು ಜನರಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿನ ಮೂಲ ತಿಳಿದು ಬಂದಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಕೇಸ್‍ಗಳು ದಾಖಲಾದ್ರೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 22 ಕೇಸ್‍ಗಳು ದಾಖಲಾಗಿ ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿವೆ.

ರಾಜ್ಯದಲ್ಲಿ ಬುಧವಾರ 120 ಹೊಸ ಕೇಸ್‍ಗಳು ದಾಖಲಾಗಿದ್ದು. ಮತ್ತೆ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಪಾಸಿಟಿವ್ ಬಂದ ಪ್ರಕರಣಗಳಿಗಿಂತ ಎರಡರಷ್ಟು ಅಂದ್ರೆ 257 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *