‘ಮಣಿಪಾಲ್ ಡೆಂಟಲ್ ಕ್ಲೀನಿಕ್’ ಹೆಸ್ರಲ್ಲಿ ಅಕ್ರಮ ದಂಧೆ – ಸೈಕೋ ಡಾಕ್ಟರ್‌ಗೆ ಬಿತ್ತು ಭರ್ಜರಿ ಗೂಸಾ

ಚಿತ್ರದುರ್ಗ: ಆಸ್ಪತ್ರೆ ಅಂದ್ರೆ ಮೆಡಿಸಿನ್, ಆರೋಗ್ಯ ಕುರಿತ ಮಾಹಿತಿ ಇರೋದು ಸಹಜ. ಆದರೆ ಇಲ್ಲೊಂದು ಖಾಸಗಿ ಕ್ಲೀನಿಕ್‍ನಲ್ಲಿ ಮಹಿಳೆಯರ ಪ್ರೊಫೈಲ್ ಹಾಗೂ ನೂರಾರು ಮೊಬೈಲ್‍ಗಳು ಪತ್ತೆಯಾಗಿದೆ.

ವೈದ್ಯೋ ನಾರಾಯಣ ಹರಿ ಅಂತಾರೆ. ಆದರೆ ಕೋಟೆನಾಡು ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಮಣಿಪಾಲ್ ಸಂಸ್ಥೆಯ ಹೆಸರನ್ನು ಬಳಸಿಕೊಂಡು ನಕಲಿ ಡಾಕ್ಟರ್ ಒಬ್ಬ ಹುಟ್ಟಿಕೊಂಡಿದ್ದಾನೆ. ಈ ಹೆಲ್ತ್ ಕ್ಲೀನಿಕ್ ಮಾತ್ರ ರೋಗಿಗಳ ಪಾಲಿಗೆ ಯಮಲೋಕ ಎನಿಸಿದೆ. 37 ವರ್ಷದ ಪೋಷಕ್ ಗೆ ಮದುವೆ ಆಗಿಲ್ಲ. ಹಾಗಾಗಿ ಈತ ಮ್ಯಾಟ್ರಿಮೋನಿ ಡಾಟ್ ಕಾಂನಲ್ಲಿ ತಾನೊಬ್ಬ ಸರ್ಕಾರಿ ವೈದ್ಯ ಅಂತ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಒಂದೂವರೆ ಸಾವಿರಕ್ಕೂ ಹೆಚ್ಚು ಯುವತಿಯರ ಮೊಬೈಲ್ ನಂಬರ್‍ಗಳ ಸಹಿತ ವೆಬ್‍ಸೈಟ್‍ಗಳಿಂದ ರೆಸ್ಯುಮ್ ಕೂಡ ಸಂಗ್ರಹಿಸಿಟ್ಟಿದ್ದಾನೆ.

ನಾಮಕಾವಸ್ಥೆಗೆ ಡೆಂಟಲ್ ಕ್ಲೀನಿಕ್ ಅಂತ ಬೋರ್ಡ್ ನೇತಾಕಿ ಮಹಿಳೆಯರು ಹಾಗೂ ಯುವತಿಯರಿಗೆ ವಂಚಿಸಿ ಕಿರುಕುಳ ನೀಡ್ತಾನಂತೆ. ಹೀಗಾಗಿ ನೊಂದ ಯುವತಿಯರಿಂದ ಮಾಹಿತಿ ಪಡೆದ ಸ್ಥಳಿಯ ಯುವಕರು, ಈ ಸೈಕೊ ಡಾಕ್ಟರ್‍ಗೆ ಭರ್ಜರಿ ಗೂಸಾ ಕೊಟ್ಟಿದ್ದಾರೆ.

ಇವನ ಅಚಾತುರ್ಯದ ಬಗ್ಗೆ ಹಲವು ಬಾರಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ವಂತೆ. ಮಹಿಳೆಯರ ರೆಸ್ಯುಮ್ ಸಂಗ್ರಹದ ಬಗ್ಗೆ ಕೇಳಿದಾಗ, ನಾನು ಮದುವೆಯಾಗಲು ವಧು ಅನ್ವೇಷಣೆಗಾಗಿ ಯುವತಿಯರ ರೆಸ್ಯುಮ್ ಸಂಗ್ರಹಿಸಿರುವುದಾಗಿ ಹೇಳಿದ್ದಾನೆ. ಇನ್ನು ಡಿಹೆಚ್‍ಓ ಡಾ.ಪಾಲಾಕ್ಷ ಮಾತನಾಡಿ, ಪೋಷಕ್ ಸರ್ಕಾರಿ ವೈದ್ಯರಲ್ಲ. ಹೀಗಾಗಿ ಕ್ಲೀನಿಕ್‍ಗೆ ವಿಸಿಟ್ ಮಾಡಿ ಅಗತ್ಯ ಕ್ರಮ ಕೈಗೊಳ್ತೀವಿ ಅಂತ ಭರವಸೆ ನೀಡಿದ್ದಾರೆ.

ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆ ಹೆಸರು ಬಳಸಿಕೊಂಡು ಕಸದ ತೊಟ್ಟಿಯಂತಿರುವ ಕ್ಲೀನಿಕ್ ನಡಸಲಾಗ್ತಿದೆ. ಮಾತ್ರವಲ್ಲ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಈ ಸೈಕೊ ಡಾಕ್ಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಹಿತ ಕಾಯಬೇಕಿದೆ.

Comments

Leave a Reply

Your email address will not be published. Required fields are marked *