ಮಗಳಿಗೆ ಸೆಲ್ಯೂಟ್ ಹೊಡೆದ ತಂದೆಯ ಫೋಟೋ ವೈರಲ್

– ಮಗಳು ಡಿವೈಎಸ್‍ಪಿ, ತಂದೆ ಸರ್ಕಲ್ ಇನ್ಸ್ ಪೆಕ್ಟರ್
– ಫೋಟೋ ನೋಡಿ ನೆಟ್ಟಿಗರು ಫಿದಾ
– ನೆಟ್ಟಿಗರಿಂದ ಭಾವನಾತ್ಮಕ ಕಾಮೆಂಟ್

ಹೈದರಾಬಾದ್: ಆಂಧ್ರಪ್ರದೇಶದ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಭಾವನಾತ್ಮಕವಾದ ಫೋಟೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೌದು. ಕರ್ತವ್ಯದಲ್ಲಿದ್ದ ತಂದೆಯೊಬ್ಬರು ಕರ್ತವ್ಯದಲ್ಲಿದ್ದ ತನ್ನ ಮಗಳಿಗೆ ಸೆಲ್ಯೂಟ್ ಹೊಡೆದ ಫೋಟೋ ಇದಾಗಿದೆ. ಈ ಫೋಟೋವನ್ನು ಆಂಧ್ರಪ್ರದೇಶ್ ಪೊಲೀಸ್ ಟ್ವಿಟ್ಟರ್ ಖಾತೆಯಿಂದ ಭಾನುವಾರ ಶೇರ್ ಮಾಡಲಾಗಿತ್ತು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಡ ಭಾವನಾತ್ಮಕ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ಯಾಮ್ ಸುಂದರ್ ಅವರ ಮಗಳು ಜೆಸ್ಸಿ ಪ್ರಶಾಂತಿ ಗುಂಟೂರು ಜಿಲ್ಲೆಯ ಡಿಎಸ್‍ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ ಶ್ಯಾಮ್ ಸುಂದರ್ ಅವರು ತಮ್ಮ ಮಗಳಿಗೆ ಸೆಲ್ಯೂಟ್ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿಯೇ ಶ್ಯಾಮ್ ಸುಂದರ್ ಅವರು ತನ್ನ ಮಗಳನ್ನು ಭೇಟಿಯಾಗಿದ್ದಾರೆ. ಜನವರಿ 3ರಂದು ರಾಜ್ಯ ಪೊಲೀಸರ ಸಭೆಯಲ್ಲಿ ಭಾಗವಹಿಸಿದಾಗ ತಿರುಪತಿಯಲ್ಲಿ ಶ್ಯಾಮ್ ಸುಂದರ್ ತಮ್ಮ ಮಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ತಂದೆಯೇ ಮಗಳಿಗೆ ಸೆಲ್ಯೂಟ್ ಹೊಡೆದಿರುವುದು ಭಾವನಾತ್ಮಕ ರೂಪ ಪಡೆದಿದೆ.

ಆಂಧ್ರಪ್ರದೇಶ ಟ್ವಿಟ್ಟರ್ ಖಾತೆಯಲ್ಲಿ APPolice1stDutyMeet ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿ ಒಂದು ಕುಟುಂಬವನ್ನು ಒಟ್ಟುಗೂಡಿಸುತ್ತದೆ. ತಿರುಪತಿಯಲ್ಲಿ ನಡೆದ ಪೊಲೀಸ್ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಅವರು ತಮ್ಮ ಸ್ವಂತ ಮಗಳು ಜೆಸ್ಸಿ ಪ್ರಶಾಂತಿಗೆ ಹೆಮ್ಮೆಯಿಂದ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದ್ದಾರೆ. ನಿಜಕ್ಕೂ ಇದು ಒಂದು ಅಪರೂಪ ಹಾಗೂ ಮನಮುಟ್ಟುವಂತ ದೃಶ್ಯವಾಗಿದೆ ಎಂದು ಬರೆದುಕೊಳ್ಳಲಾಗಿದೆ.

ಆಂಧ್ರ ಪೊಲಿಸ್ ಖಾತೆಯಲ್ಲಿ ಈ ಫೋಟೋ ಅಪ್ಲೋಡ್ ಆಗುತ್ತಿದ್ದಂತೆಯೇ ಸುಮಾರು 9 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ 2 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಎಂತಹ ಅದ್ಭುತ ಕ್ಷಣ..! ಇಲ್ಲಿ ತಂದೆ ತನ್ನ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ಮಗಳ ನಗು ತಂದೆ- ಮಗಳ ಸಂಬಂಧವನ್ನು ವಿವರಿಸಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ನಿಜಕ್ಕೂ ಎಂತಹ ಹೆಮ್ಮೆಹ ಕ್ಷಣ ಎಂದು ಬಣ್ಣಿಸಿದ್ದಾರೆ. ಹೀಗೆ ಹಲವಾರ ಕಾಮೆಂಟ್ ಗಳು ಬಂದಿವೆ.

Comments

Leave a Reply

Your email address will not be published. Required fields are marked *