ಮಗಳಿಗೆ ಆಗ್ತಿರೋ ಹಿಂಸೆ ಸಹಿಸಲಾಗದೆ ತಂದೆ ಆತ್ಮಹತ್ಯೆ – ಮರುದಿನವೇ ರೈಲಿನ ಮುಂದೆ ಹಾರಿದ ಪುತ್ರಿಯರು

– ಟೆಕ್ಕಿ ಅಳಿಯ ಕಿರುಕುಳಕ್ಕೆ ಅಪ್ಪ-ಮಕ್ಕಳು ಸಾವು
– ಸೆಲ್ಫಿ ವಿಡಿಯೋ ಮಾಡಿ ತಂದೆ ಸೂಸೈಡ್

ಹೈದರಾಬಾದ್: ಅಳಿಯನ ಕಿರುಕುಳ ಸಹಿಸಲಾಗದೆ ತಂದೆ ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಒಂದೇ ಕುಟುಂಬಕ್ಕೆ ಮೂವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಪ್ರೊದ್ದತೂರ್ ಪಟ್ಟಣದ ವೈಎಂಆರ್ ಕಾಲೋನಿಯ ನಿವಾಸಿ ಬಾಬು ರೆಡ್ಡಿ (55) ಮತ್ತು ಇಬ್ಬರು ಹೆಣ್ಣುಮಕ್ಕಳಾದ ಶ್ವೇತಾ ರೆಡ್ಡಿ (26) ಹಾಗೂ ಸಾಯಿ ರೆಡ್ಡಿ (21) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ?
ಮೃತ ಬಾಬು ರೆಡ್ಡಿ ಒಂದು ವರ್ಷದ ಹಿಂದೆ ತನ್ನ ಹಿರಿಯ ಮಗಳು ಶ್ವೇತಾ ರೆಡ್ಡಿಯನ್ನ ಸಾಫ್ಟ್ ವೇರ್ ಎಂಜಿನಿಯರ್ ಸುರೇಶ್ ಕುಮಾರ್ ರೆಡ್ಡಿ ಜೊತೆ ಮದುವೆ ಮಾಡಿದ್ದರು. ಹೊಸದಾಗಿ ಮದುವೆಯಾದ ದಂಪತಿ ನಡುವೆ ಆಗಾಗ ಭಿನ್ನಾಭಿಪ್ರಾಯ ಉಂಟಾಗಿ ಜಗಳ ನಡೆಯುತ್ತಿತ್ತು. ಇದರಿಂದ ಬೇಸರಗೊಂಡ ಶ್ವೇತಾ ರೆಡ್ಡಿ ಇತ್ತೀಚೆಗೆ ತನ್ನ ಪೋಷಕರ ಮನೆಗೆ ವಾಪಸ್ ಬಂದಿದ್ದಳು.

ಇತ್ತ ಸುರೇಶ್ ಕುಮಾರ್ ರೆಡ್ಡಿ ಮನೆ ಬಿಟ್ಟು ಬಂದಿದ್ದರೂ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ಶ್ವೇತಾ, ಸುರೇಶ್‍ನನ್ನು ಮದುವೆಯಾದಾಗಿನಿಂದಲೂ ತನ್ನ ಜೀವನವು ತುಂಬಾ ಕಷ್ಟವಾಗಿದೆ ಎಂದು ಪೋಷಕರಿಗೆ ತನ್ನ ನೋವು ಹೇಳಿಕೊಂಡಿದ್ದಾಳೆ. ಕೊನೆಗೆ ತನ್ನ ಮಗಳಿಗೆ ಆಗುತ್ತಿರುವ ಹಿಂಸೆಯನ್ನು ಸಹಿಸಲಾಗದೆ ತಂದೆ ಬಾಬು ರೆಡ್ಡಿ ಶುಕ್ರವಾರ ರಾತ್ರಿ ತನ್ನ ನಿವಾಸದಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಬು ರೆಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿದ್ದರು. ಅದರಲ್ಲಿ, ಅಳಿಯ ಸುರೇಶ್ ರೆಡ್ಡಿ ನನ್ನ ಸಾವಿಗೆ ಕಾರಣನಾಗಿದ್ದಾನೆ. ಅಲ್ಲದೇ ಆತನ ಅಪರಾಧಗಳಿಗೆ ಶಿಕ್ಷೆ ವಿಧಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಇತ್ತ ತಂದೆಯ ಸಾವಿನ ನಂತರ ಆಘಾತಕ್ಕೊಳಗಾದ ಶ್ವೇತಾ ರೆಡ್ಡಿ ಮತ್ತು ಸಾಯಿ ರೆಡ್ಡಿ ಇಬ್ಬರು ಶನಿವಾರ ಬೆಳಗ್ಗೆ ಯೆರಗುಂಟ್ಲಾ ಮಂಡಲದ  ಬಳಿ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *