ಮಗನ ಉಳಿಸಲು ಕಿಡ್ನಿ ನೀಡಲು ಮುಂದಾದ ತಾಯಿ

ಕೊಪ್ಪಳ: ಎರಡು ಕಿಡ್ನಿ ವಿಫಲವಾಗಿ ಆನಾರೋಗ್ಯದಿಂದ ಬಳಲುತ್ತಿರುವ ಮಗನನ್ನು ಉಳಿಸಲು ತಾಯಿ ತನ್ನ ಕಿಡ್ನಿಯನ್ನು ನೀಡಲು ಮುಂದಾಗಿರುವ ಘಟನೆ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶರಣಪ್ಪಗೌಡ ಪಾರ್ವತಿ ದಂಪತಿಯ ಪುತ್ರನಾದ ಮಂಜುನಾಥ್ ಎರಡು ಕಿಡ್ನಿ ಕಳೆದುಕೊಂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ತಲೆನೋವು ಎಂದು ಆಸ್ಪತ್ರೆಗೆ ಹೋದಾಗ ಎರಡು ಕಿಡ್ನಿ ವಿಫಲವಾಗಿರುವುದು ತಿಳಿದು ಬಂದಿದೆ. ಇದೀಗ ಮಗನನ್ನು ಉಳಿಸಲು ತಾಯಿ ಪಾರ್ವತಿ ಮಗ ಮಂಜುನಾಥ್‍ಗೆ ಒಂದು ಕಿಡ್ನಿ ನೀಡಲು ಮುಂದಾಗಿದ್ದಾರೆ.

ಈಗಾಗಲೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಪಾರ್ವತಿ ಕಿಡ್ನಿ ಸರಿಹೊಂದುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಚಿಕಿತ್ಸೆಗಾಗಿ ಏಳು ಲಕ್ಷ ಹಣದ ಅವಶ್ಯಕತೆ ಇದ್ದು ಇದನ್ನು ಬರಿಸುವ ಶಕ್ತಿ ಮನೆಯವರಿಗೆ ಇಲ್ಲ. ಮಂಜುನಾಥ್ ಅವರ ಪೋಷಕರು ಈಗ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.

ಶರಣಪ್ಪಗೌಡ ಹಾಗೂ ಪಾರ್ವತಿ ದಂಪತಿಯ ಮೂವರು ಮಕ್ಕಳಲ್ಲಿ ಮಂಜುನಾಥ್ ಏಕೈಕ ಗಂಡು ಮಗನಾಗಿದ್ದಾನೆ. ಮಂಜುನಾಥ್ ಅವರು ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡಿ ಮನೆ ನಡೆಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಏಕಾಏಕಿ ಕಿಡ್ನಿ ವಿಫಲವಾದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ದಿನ ದುಡಿದು ಮನೆ ನಡೆಸುತ್ತಿದ್ದ ಮಂಜುನಾಥ್ ಹಾಸಿಗೆ ಹಿಡಿದರುವ ಕಾರಣ ತಾಯಿ ಪಾರ್ವತಿ ಕಣ್ಣೀರು ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *