ಮಗನಿಗೆ ಏನೂ ಆಗಲ್ಲ ಅಂದಿದ್ರು, ವಿನಯ್ ಗುರೂಜಿ ಭೇಟಿಗೆ ಬಂದೆ: ಕಾರಜೋಳ

– ಒಡೆದ ಮನೆ ಆಗಿರೋ ಕಾಂಗ್ರೆಸ್‍ನಲ್ಲಿ ಮೂರು ಗುಂಪು

ಚಿಕ್ಕಮಗಳೂರು: ನನ್ನ ಮಗ ಎರಡೂವರೆ ತಿಂಗಳುಗಳ ಕಾಲ ವೆಂಟಿಲೇಟರ್ ನಲ್ಲಿದ್ದ. ಆಗ ವಿನಯ್ ಗುರೂಜಿ ಬೆಂಗಳೂರಿಗೆ ಬಂದು ನಿಮ್ಮ ಮಗನಿಗೆ ಏನೂ ಆಗಲ್ಲ. ನೀವು ಭಯ ಪಡಬೇಡಿ. ದೇವರು ಕಾಪಾಡುತ್ತಾನೆ ಎಂದು ಹೇಳಿ ಆಶೀರ್ವಾದ ಮಾಡಿದ್ದರು. ಅವರ ಅಷ್ಟು ಕಳಕಳಿಯಿಂದ ಬೆಂಗಳೂರಿಗೆ ಬಂದು ಆಶೀರ್ವಾದ ಮಾಡಿದ್ದರು. ಈಗ ಮಗ ಚೆನ್ನಾಗಿದ್ದಾನೆ. ಹಾಗಾಗಿ ಅವರ ದರ್ಶನಕ್ಕಾಗಿ ಜಿಲ್ಲೆಗೆ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಇದೇ ವೇಳೆ ರಾಜ್ಯ ರಾಜಕೀಯದ ಕುರಿತಾಗಿ ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ವಿವಾದಗಳ ಜೊತೆ ಇರಲ್ಲ. ಆದರೂ ನೀವು ಕೇಳುತ್ತಿದ್ದೀರಾ ಎಂದು ಹೇಳುತ್ತೇನೆ ಎಂದು ಹೇಳಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಹಾಸ್ಯಾಸ್ಪದ. ಪ್ರಧಾನಿ ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಭಾರತೀಯ ಜನತಾ ಪಕ್ಷ ಆಗಿದೆ. 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಾಗಾದ್ರೆ ಕುಮಾರಸ್ವಾಮಿಯವರ ಆಶೀರ್ವಾದದಿಂದಲೇ ಬಂದಿದೆಯಾ ಎಂದು ವಿರುದ್ಧ ವ್ಯಂಗ್ಯವಾಡಿದರು. ಇದನ್ನೂ ಓದಿ: ನನಗೆ 70 ವರ್ಷ ವಯಸ್ಸಾಗಿದೆ- ಗೋವಿಂದ್ ಕಾರಜೋಳ ಕಣ್ಣೀರು– ನಾನು, ನನ್ನ ಕುಟುಂಬ ಕೊರೊನಾದಿಂದ ಬಳಲ್ತಿದ್ದೇವೆ

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ಸದೃಢವಾಗಿದೆ. 2009ರಲ್ಲೇ ಮೋದಿ ಭಾರತ ಕಾಂಗ್ರೆಸ್ ಮುಕ್ತ ಭಾರತವಾಗುತ್ತೆ ಎಂದಿದ್ದರು. ಇವತ್ತು ಕಾಂಗ್ರೆಸ್ ಭಾರತ ಮುಕ್ತ ಭಾರತವಾಗಿದ್ದು, ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಪ್ರಶ್ನಿಸಿದರು. ಪಂಜಾಬ್ ಅಲ್ಲಿ-ಇಲ್ಲಿ ಒಂದೆರಡು ಬಿಟ್ಟರೇ ಎಲ್ಲಿದೆ ಎಂದರು. ಇನ್ನು ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು ಸಿದ್ದರಾಮಯ್ಯನವರದ್ದು ಒಂದು ಗುಂಪು, ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರದ್ದು ಒಂದು ಗುಂಪು. ಈ ಮೂರು ಗುಂಪುಗಳ ಮಧ್ಯೆ ದಿನದ 24 ಗಂಟೆಯೂ ಒಳಗೆ ಗುದ್ದಾಟ ನಡೆಯುತ್ತಿರುತ್ತೆ. ಆ ಗುದ್ದಾಟ ಹೊಸದಲ್ಲ ಅದರಲ್ಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

Comments

Leave a Reply

Your email address will not be published. Required fields are marked *