ಮಗನನ್ನು ಮನೆಗೆ ಬಿಟ್ಟು ಬರುತ್ತೇನೆ- ಸಾಮೂಹಿಕ ಅತ್ಯಾಚಾರ ನಡೆಸಿದ ಕ್ರೂರಿಗಳಿಗೆ ಮಹಿಳೆ ಪ್ರಮಾಣ

– ಪುಣ್ಯಕೋಟಿ ಕಥೆ ನೆನಪಿಸುತ್ತೆ ಘಟನೆ
– ಸಿಗರೇಟ್ ಬೆಂಕಿಯಿಂದ ಹಿಂಸಿಸಿದ ಕ್ರೂರಿಗಳು
– ಪತಿಯ ಸಹಾಯದಿಂದ ಆತನ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

ತಿರುವನಂತಪುರಂ: ಕೇರಳದ ತಿರುವನಂತಪುರಂ ಅಮಾನವೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದು, ಇತ್ತೀಚೆಗಷ್ಟೆ ಗರ್ಭಿಣಿ ಆನೆಗೆ ಪೈನಾಪಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ತಿನ್ನಿಸಿ ಸಾಯಿಸಲಾಗಿತ್ತು. ಇದೀಗ ಪುಟ್ಟ ಮಗನೆದುರೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಸಿಗರೇಟ್ ಬೆಂಕಿಯಿಂದ ಸುಟ್ಟು, ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ವರ್ತಿಸಿರುವ ಘಟನೆ ನಡೆದಿದೆ.

ಕೇರಳದ ತಿರುವನಂತಪುರಂನ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಕ್ರೂರವಾಗಿ ವರ್ತಿಸಿರುವ ಕುರಿತು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪತಿ ಹಾಗೂ ಮಗನೊಂದಿಗೆ ಇದ್ದಾಗ ಆತನ ಸ್ನೇಹಿತರೇ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು, ನಂತರ ಪುಟ್ಟ ಮಗನೆದುರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಪತಿ ಸೇರಿದಂತೆ ಐವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

ಪ್ರಕರಣದ ಕುರಿತು ಮಹಿಳೆ ಹೇಳಿಕೆ ನೀಡಿದ್ದು, ನನ್ನನ್ನು ವಾಹನದಲ್ಲಿ ಎಳೆದು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ನಂತರ ವಿಪರೀತವಾಗಿ ಥಳಿಸಿದರು ನಾನು ಪ್ರಜ್ಞಾಹೀನಳಾದೆ. ನಂತರ ನನ್ನ ಮಗುವಿನ ಅಳು ಶಬ್ದ ಕೇಳಿ ಪ್ರಜ್ಞೆ ಬಂದಿತು. ಆಗ ಸಿಗರೇಟ್ ಬೆಂಕಿಯಿಂದ ಸುಟ್ಟ ಗಾಯಗಳಿದ್ದವು ಎಂದು ತಿಳಿಸಿದ್ದಾರೆ.

ನಾನು ಎಚ್ಚರಗೊಂಡಾಗ ನನ್ನ ಬಟ್ಟೆ ಇರಲಿಲ್ಲ ಕೇವಲ ಟಾಪ್ ಮಾತ್ರ ಇತ್ತು. ಮಗ ಅಳುತ್ತಿದ್ದ, ನನ್ನ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಿಡಿ ಎಂದು ಮನವಿ ಮಾಡಿದೆ. ಅಲ್ಲದೆ ನನ್ನ ಮಗನನ್ನು ಮನೆಗೆ ಬಿಟ್ಟು ಖಂಡಿತ ಮರಳಿ ಬರುತ್ತೇನೆ ಎಂದು ಮಾತು ಕೊಟ್ಟೆ. ನಂತರ ಮಗನೊಂದಿಗೆ ಓಡಿ ಬಂದು ಮುಖ್ಯ ರಸ್ತೆ ತಲುಪಿದೆ. ಮೋಟರ್ ಸೈಕಲ್‍ನಲ್ಲಿ ಬಂದ ವ್ಯಕ್ತಿ ನಮ್ಮ ಕಾರು ತಲುಪಲು ಸಹಾಯ ಮಾಡಿದ. ನಂತರ ಮನೆ ತಲುಪಿದೆವು ಎಂದು ವಿವರಿಸಿದ್ದಾರೆ.

ಮಹಿಳೆ ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಗುರುವಾರ ತಿರುವನಂತಪುರಂ ಬಳಿಯ ಪುತ್ತುಕುರಿಚಿಯ ಬೀಚ್‍ಗೆ ತೆರಳಿದ್ದರು. ನಂತರ ಪತಿ ಮಹಿಳೆಯನ್ನು ತನ್ನ ಸ್ನೇಹಿತರಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆತನ ನಾಲ್ವರು ಸ್ನೇಹಿತರು ಮಹಿಳೆಗೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ಪ್ರತಿ ದಿನ ಸಂಜೆ ಈ ಕುಟುಂಬ ಬೀಚ್‍ಗೆ ತೆರಳುತ್ತಿತ್ತು. ಆದರೆ ಈ ಬಾರಿ ಮಹಿಳೆಯ ಪತಿ ಆತನ ಸ್ನೇಹಿತರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದು, ಮದ್ಯದ ವ್ಯವಸ್ಥೆಯನ್ನೂ ಮಾಡಿದ್ದಾನೆ. ಸಂತ್ರಸ್ತೆಯನ್ನು ತನ್ನ ಸ್ನೇಹಿತರ ಬಳಿ ಬಿಟ್ಟು ಮರಳಿದ್ದಾನೆ. ಅವರು ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.

ರಸ್ತೆ ಬಳಿ ಸಹಾಯ ಮಾಡಿದ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಡಿಸ್ಚಾರ್ಜ್ ಆಗಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *