ಮಂತ್ರಾಲಯ ಶ್ರೀಗಳಿಗೆ ಗುಲ್ಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

ರಾಯಚೂರು: ಮಂತ್ರಾಲಯದ ಶ್ರೀಸುಭುದೇಂದ್ರ ತೀರ್ಥರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಇಂದು ಪ್ರದಾನ ಮಾಡಲಾಯಿತು.

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಗುಲ್ಬರ್ಗಾ ವಿವಿ ಪ್ರಭಾರಿ ಕುಲಪತಿ ಚಂದ್ರಕಾಂತ್ ಯಾತನೂರ್ ಶ್ರೀಗಳಿಗೆ ಡಾಕ್ಟರೇಟ್ ನೀಡಿ ಗೌರವಿಸಿದರು.

ನವೆಂಬರ್ 20ರಂದು ಕಲಬುರಗಿಯ ವಿವಿ ಆವರಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದರೆ ತುಂಗಭದ್ರಾ ಪುಷ್ಕರ ಹಿನ್ನಲೆ ಸ್ವಾಮೀಜಿ ಕಲಬುರಗಿಗೆ ಹೋಗಿರಲಿಲ್ಲ. ಹೀಗಾಗಿ ಸ್ವತಃ ವಿವಿ ಕುಲಪತಿಗಳೇ ಮಠದಲ್ಲಿ ಸ್ವಾಮಿಜಿಯನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಮಠದ ಭಕ್ತರು ಭಾಗವಹಿಸಿದ್ದರು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಶ್ರೀಸುಭುದೇಂದ್ರ ತೀರ್ಥರು, ವಿವಿಯು ನಮ್ಮ ಸೇವೆ ಗುರುತಿಸಿ ಗೌರವ ನೀಡಿದೆ. ಆಶ್ರಮ ನೀತಿಯಂತೆ ಪ್ರಶಸ್ತಿ ಸ್ವೀಕರಿಸುವಂತಿಲ್ಲ. ಆದರೆ ಭಗವಂತನಿಗೆ ನೀಡುತ್ತಿದ್ದಾರೆ ಎಂದುಕೊಂಡು ಸ್ವೀಕರಿಸಿ ರಾಯರ ಪಾದಕ್ಕೆ ಸಮರ್ಪಿಸುತ್ತೇನೆ. ಈ ಗೌರವ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಇನ್ನೂ ಚಳಿ ಇದೆ, ಈ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸುವುದು ಬೇಡ. ಈಗ ನಿರ್ಧರಿಸಿದ್ದನ್ನು ಸರ್ಕಾರ ಪರಾಮರ್ಶಿಸಬೇಕು. ಕೊರೊನಾ ಎರಡನೇ ಅಲೆ ಬರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಚಿಕ್ಕ ಮಕ್ಕಳು ಸಾಮಾಜಿಕ ಅಂತರ, ಕೊರೊನಾ ನಿಯಮಾವಳಿ ಪಾಲಿಸುವುದು ಕಷ್ಟ. ಹೀಗಾಗಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವುದನ್ನು ಮುಂದೂಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋ ಹತ್ಯೆ ಮಾತ್ರವಲ್ಲ ಪ್ರಾಣಿ ಹತ್ಯೆಯನ್ನೇ ನಿಲ್ಲಿಸಬೇಕು. ಮೊದಲಿಗೆ ಪ್ರಾಯೋಗಿಕ ಹಂತವಾಗಿ ಗೋ ಹತ್ಯೆ ಸಂಪೂರ್ಣ ನಿಷೇಧಿಸಬೇಕು. ಸರ್ಕಾರ ಗೋ ಹತ್ಯೆ ನಿಷೇಧ ಕಾಯಿದೆಯನ್ನ ಜಾರಿಗೆ ತರಬೇಕು. ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಅನ್ವಯವಾಗುವಂತೆ ಕಾಯಿದೆ ತರಬೇಕು ಎಂದು ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.

Comments

Leave a Reply

Your email address will not be published. Required fields are marked *