ಮಂಗ್ಳೂರಲ್ಲಿ ರಸ್ತೆಗಿಳಿದ ಖಾಸಗಿ ಬಸ್ಸುಗಳು-ಕ್ಯಾಶ್‍ಲೆಸ್ ಪ್ರಯಾಣ, ಸೀಟಿಗೊಬ್ಬ ಪ್ರಯಾಣಿಕ

– ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯ

ಮಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ಇಂದಿನಿಂದ ಆರಂಭಗೊಂಡಿದೆ. ಆ ಮೂಲಕ 71 ದಿನಗಳ ಕಾಲ ಚಲಿಸದೆ ಇದ್ದ ಬಸ್ಸುಗಳು ಕಾರ್ಯಾರಂಭ ಮಾಡಿದ್ದು, ಪ್ರಾರಂಭಕ್ಕೂ ಮುಂಚೆ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಯಿತು.

ಪ್ರಾರಂಭಿಕ ಹಂತದಲ್ಲಿ ಕೆಲವೇ ಬಸ್ಸುಗಳ ಓಡಾಟವನ್ನು ಪ್ರಾರಂಭಿಸಿ, ಪ್ರಯಾಣಿಕರ ಬೇಡಿಕೆಯ ಮೇರೆಗೆ ಮತ್ತು ಜನಸಂದಣಿ, ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಬಸ್ಸುಗಳ ಸಂಖ್ಯೆ ಕ್ರಮೇಣ ಹೆಚ್ಚಿಸಲು ನಿರ್ಧರಿಸಲಾಗಿದೆ. ಮಂಗಳೂರಿನಿಂದ ಪುತ್ತೂರು, ಉಪ್ಪಿನಂಗಡಿ, ಮೂಡಬಿದ್ರೆ, ಉಡುಪಿ, ಕಾರ್ಕಳ, ಕಿನ್ನಿಗೋಳಿ ಸೇರಿ ಇತರ ಕಡೆಗೆ ಖಾಸಗಿ ಬಸ್ಸುಗಳ ಸಂಚಾರ ಆರಂಭಗೊಂಡಿದೆ.

ಬಿಸಿರೋಡ್, ಉಪ್ಪಿನಂಗಡಿ, ಮೂಡಬಿದ್ರೆ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಕೂಡ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಪ್ರಯಾಣ ವೇಳೆ ಪ್ರಯಾಣಿಕರು ಸುರಕ್ಷಿತ ಅಂತರ, ಮಾಸ್ಕ್ ಹಾಗೂ ಕೈಗಳಿಗೆ ಸ್ಯಾನಿಟೈಜರ್ ಬಳಸುವುದು ಹಾಗೂ ತಮ್ಮದೇ ಆದ ಆಹಾರ, ನೀರು ಉಪಯೋಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಪ್ರಯಾಣಿಕರು ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ತಮ್ಮಲ್ಲಿಟ್ಟುಕೊಂಡು ಪ್ರಯಾಣಿಸಲು ಸೂಚಿಸಲಾಗಿದೆ. ವಾಹನಗಳ ಮಾರ್ಗಸೂಚಿ ಪ್ರಕಾರ ಬಸ್ ಸ್ಯಾನಿಟೈಜೇಶನ್, ಡ್ರೈವರ್ ಹಾಗೂ ಕಂಡೆಕ್ಟರ್ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಲು ಸೂಚಿಸಲಾಗಿದೆ.

Comments

Leave a Reply

Your email address will not be published. Required fields are marked *