ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‍ಗೆ ಹಸ್ತಾಂತರ – ಕಾಂಗ್ರೆಸ್ ವಿರೋಧ

ಮಂಗಳೂರು: ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಮಂಗಳೂರಿನ ಬಜಪೆ ಕೆಂಜಾರು ಬಳಿಯಲ್ಲಿರುವ ಪ್ರವೇಶ ದ್ವಾರದ ಎದುರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವಾರದ ಹಿಂದೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆಯನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರಿಸಲಾಗಿತ್ತು. ಅದೇ ದಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಅದಾನಿ ಏರ್ ಪೋರ್ಟ್ ಎಂದು ಬದಲಾಯಿಸಲಾಗಿತ್ತು.

ಹೀಗಾಗಿ ಈ ಗುತ್ತಿಗೆಯನ್ನು ಕೈ ಬಿಟ್ಟು ಮತ್ತೆ ಸರ್ಕಾರವೇ ನಿರ್ವಹಣೆ ಮಾಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಮಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳೂರಿಗೆ ಸಂಬಂಧಪಟ್ಟವರ ಹೆಸರನ್ನೇ ಇಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಕ್ಕಳು ಕಾಂಗ್ರೆಸ್ ಬಾವುಟ ಹಿಡಿದು ಭಾಗಿಯಾಗಿದ್ದು, ಮಾಧ್ಯಮದ ಕ್ಯಾಮೆರಾ ಕಂಡು ಎಚ್ಚೆತ್ತ ಕಾಂಗ್ರೆಸ್ ನಾಯಕರು ಬಳಿಕ ಮಕ್ಕಳನ್ನು ಪ್ರತಿಭಟನೆಯಿಂದ ವಾಪಸ್ ಕಳಿಸಿದ ಘಟನೆಯೂ ನಡೆಯಿತು.

Comments

Leave a Reply

Your email address will not be published. Required fields are marked *