ಮಂಗಳೂರು ಡ್ರಗ್ಸ್ ಜಾಲದ ಮತ್ತೋರ್ವ ಆರೋಪಿ ಅರೆಸ್ಟ್

– ಅನುಶ್ರೀ ಸೇರಿ ಹಲವು ನಟ, ನಟಿಯರ ಬಗ್ಗೆ ಬಾಯ್ಬಿಟ್ಟ ಸ್ಯಾಮ್

ಮಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಅರೆಸ್ಟ್ ಆದ ಬಳಿಕ ಪ್ರತಿ ದಿನ ಒಬ್ಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಡ್ಯಾನ್ಸ್ ಕೊರಿಯೋಗ್ರಾಫರ್‍ನ್ನು ಪೊಲೀಸರು ಬಂಧಿಸಿದ್ದಾರೆ.

ಕಿಶೋರ್ ನ ಹಳೆ ಮಿತ್ರ ಸ್ಯಾಮ್ ಫರ್ನಾಂಡಿಸ್‍ನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಸ್ಯಾಮ್ ನನ್ನು ಟಿಪಿಕಲ್ ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ಮಾಡಿದ ಬಳಿಕ ನಿರೂಪಕಿ ಅನುಶ್ರೀ ಬಗೆಗಿನ ಮತ್ತಷ್ಟು ಮಾಹಿತಿಗಳು ಸಿಸಿಬಿ ಪೊಲೀಸರಿಗೆ ಲಭ್ಯವಾಗಿವೆ. ಕಿಶೋರ್ ನಡೆಸುತ್ತಿದ್ದ ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿರುವುದಾಗಿ ಸ್ಯಾಮ್ ಫರ್ನಾಂಡಿಸ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪಾರ್ಟಿ ನಡೆಯುತ್ತಿತ್ತು. ಎರಡೂ ಕಡೆ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದಾಗಿ ಸ್ಯಾಮ್ ಹೇಳಿದ್ದಾನೆ. ಅನುಶ್ರೀ ಸೇರಿದಂತೆ ಬೆಳ್ಳಿತೆರೆ, ಕಿರುತೆರೆ ಹಾಗೂ ರಿಯಾಲಿಟಿ ಶೋನ ನಟ, ನಟಿಯರು ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಸ್ಯಾಮ್ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಈಗ ಢವ ಢವ ಆರಂಭವಾಗಿದೆ.

ಇನ್ನೊಂದೆಡೆ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ರಾಜಕೀಯ ಒತ್ತಡ ಕೂಡ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕಿಶೋರ್ ಅರೆಸ್ಟ್ ಆದ ದಿನವೇ ಆತನನ್ನು ಪ್ರಕರಣದಿಂದ ಬಿಡುಗಡೆಗೊಳಿಸಲು ಮಂಗಳೂರಿನ ಶಾಸಕರೊಬ್ಬರು ಪ್ರಯತ್ನಿಸಿರುವುದು ಗೊತ್ತಾಗಿದೆ. ಕಿಶೋರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಮತ್ತು ಕ್ರಿಕೆಟ್ ಬುಕ್ಕಿಯಾಗಿರುವ ಮಂಗಳೂರಿನ ಪ್ರತಿಷ್ಠಿತ ಯುವ ಉದ್ಯಮಿಯೋರ್ವ ಶಾಸಕನ ಮೂಲಕ ಕಿಶೋರ್ ಶೆಟ್ಟಿಯನ್ನು ಕೇಸ್ ನಿಂದ ತೆಗೆಯಲು ಯತ್ನಿಸಿರೋದಾಗಿ ತಿಳಿದುಬಂದಿದೆ. ಆದರೆ ಸಿಸಿಬಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ. ಒಟ್ಟಾರೆ ಮಂಗಳೂರಿನ ಡ್ರಗ್ ಕೇಸ್ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾದಕತೆಯ ಅಮಲೇರಿಸಿಕೊಂಡವರು ಅಂದರ್ ಆಗುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *