ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಕೊಲೆ ಯತ್ನ – ಆರು ಮಂದಿ ಆರೋಪಿಗಳ ಬಂಧನ

ಮಂಗಳೂರು: ಇಲ್ಲಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಇದೀಗ ಆರು ಮಂದಿಯನ್ನು ಬಂಧಿಸಲಾಗಿದೆ. ಮಂಗಳೂರು ಗೊಲೀಬಾರ್ ಗೆ ಪ್ರತಿಕಾರ ತೀರಿಸಲು ಪೊಲೀಸರ ಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಕಳೆದ ಡಿಸೆಂಬರ್ 16 ರಂದು ಮಂಗಳೂರಿನ ಕುದ್ರೋಳಿ ಬಳಿಯ ನ್ಯೂ ಚಿತ್ರ ಸರ್ಕಲ್ ನಲ್ಲಿ ಈ ಘಟನೆ ನಡೆದಿತ್ತು. ಕರ್ತವ್ಯ ನಿರತರಾಗಿದ್ದ ಬಂದರು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಣೇಶ್ ಕಾಮತ್ ಎಂಬವರಿಗೆ ಬೈಕ್ ನಲ್ಲಿ ಬಂದ ಇಬ್ಬರ ಪೈಕಿ ಓರ್ವ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆರೋಪಿಯ ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಅಪ್ರಾಪ್ತನಾದ ಆರೋಪಿ ಹಾಗೂ ಆತನ ಜೊತೆ ಬೈಕ್ ಚಲಾಯಿಸಿಕೊಂಡು ಬಂದಿದ್ದ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಇದೀಗ ಈ ವಿಚಾರಕ್ಕೆ ಸಂಬಂಧಸಿದಂತೆ ಕೃತ್ಯ ಎಸಗಲು ಪ್ಲಾನ್ ರೂಪಿಸಿದ್ದ ಆರು ಮಂದಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳು ಸ್ಪೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಕಳೆದ 2019 ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಸಿಎಎ.ಎನ್‍ಆರ್‍ಸಿ ಪ್ರತಿಭಟನೆಯ ವೇಳೆ ನಡೆದ ಗೊಲೀಬಾರ್ ಗೆ ಪ್ರತಿಕಾರ ತೀರಿಸಲು ಈ ಕೃತ್ಯ ಎಸಗಿದ್ದು, ಒಂದು ವರ್ಷದ ಬಳಿಕ 2020 ಡಿಸೆಂಬರ್ 19 ರಂದು ಪೊಲೀಸರನ್ನು ಹತ್ಯೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಮಾಯಾ ಗ್ಯಾಂಗ್ ಹಾಗೂ ಇನ್ನೊಂದು ಗ್ಯಾಂಗ್ ಸೇರಿ ಈ ಪ್ಲಾನ್ ಮಾಡಿದ್ದು, ಮಾಯಾಗ್ಯಾಂಗ್ ನ ಆರು ಮಂದಿಯನ್ನು ಬಂಧಿಸಲಾಗಿದ್ದು, ಇನ್ನೊಂದು ಗ್ಯಾಂಗ್ ನ ಆರೋಪಿಗಳ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

ಒಟ್ಟಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರಿಗೆ ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ತಕ್ಕ ಪಾಠ ಕಲಿಸಿದ್ದು, ಇತರ ಪೊಲೀಸರಿಗೂ ಧೈರ್ಯ ತುಂಬಿದ್ದಾರೆ.

Comments

Leave a Reply

Your email address will not be published. Required fields are marked *