ಮಂಗಳವಾರ ಪರಿಷತ್ ಕಲಾಪ – ಸಭಾಪತಿ ಪದಚ್ಯುತಿ ಆಗುತ್ತಾ?

ಬೆಂಗಳೂರು: ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಇದೇ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸುತ್ತಿದೆ. ನಾಳೆ ಪರಿಷತ್ ಕಲಾಪ ಆರಂಭವಾದ ಕೂಡಲೇ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡರನ್ನು ಕೂರಿಸಲು ಬಿಜೆಪಿ ಪ್ಲಾನ್ ಎ ರೆಡಿ ಮಾಡಿದೆ.

ಒಂದೊಮ್ಮೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮೊದಲೇ ಪೀಠದ ಮೇಲೆ ಬಂದು ಕೂತರೆ, ಪಕ್ಕದಲ್ಲೇ ಮತ್ತೊಂದು ಪೀಠ ಹಾಕಿ ಅದರಲ್ಲಿ ಉಪಸಭಾಪತಿ ಧರ್ಮೇಗೌಡರನ್ನು ಕೂರಿಸಲು ಸಹ ಬಿಜೆಪಿ ಪ್ಲಾನ್ ಮಾಡ್ಕೊಂಡಿದೆ. ಅವಿಶ್ವಾಸ ನಿರ್ಣಯದ ನೋಟಿಸ್ ಕೊಟ್ಟಿರುವ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಪೀಠದ ಮೇಲೆ ಕೂರುವುದಕ್ಕೆ ಅವಕಾಶ ಕೊಡದೇ ಬಿಜೆಪಿ ಗದ್ದಲ ನಡೆಸುವ ಸಂಭವ ಇದೆ.

ಸಭಾಪತಿ ಬದಲಾವಣೆ ಆದಲ್ಲಿ ಮಾತ್ರ ಗೋಹತ್ಯೆ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಬಿಜೆಪಿ ಪ್ಲಾನ್ ಮಾಡಿದೆ. ಸಭಾಪತಿ ಬದಲಾವಣೆ ವಿಚಾರದಲ್ಲಿ ಜೆಡಿಎಸ್ ಬೆಂಬಲ ಸಿಗುವ ವಿಶ್ವಾಸದಲ್ಲಿ ಬಿಜೆಪಿ ಇದೆ. ಸಭಾಪತಿ ಸ್ಥಾನಕ್ಕೆ ಬಿಜೆಪಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ, ಸುಶೀಲ್ ನಮೋಶಿ, ಮಹಾಂತೇಶ ಕವಟಗಿಮಠ, ಅರುಣ್ ಶಹಾಪೂರ ಹೆಸರುಗಳು ಕೇಳಿಬರುತ್ತಿವೆ.

ನಾಳೆ ಬೆಳಗ್ಗೆ ಸಭಾಪತಿ ಸ್ಥಾನದ ಅಭ್ಯರ್ಥಿ ಹೆಸರನ್ನು ಬಿಜೆಪಿ ಅಖೈರು ಮಾಡಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸದನದಲ್ಲಿ ಜೆಡಿಎಸ್ ಪಾತ್ರ ಸ್ಪಷ್ಟವಾಗಿದೆ. ಸಭಾಪತಿ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಚಾರದಲ್ಲಿ ಪಕ್ಷದ ತೀರ್ಮಾನ ನಾಳೆ ಪ್ರಕಟಿಸಲಾಗುವುದು ಎಂದಿದ್ದಾರೆ.

ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಮಾತನಾಡಿ, ಸಭಾಪತಿಗಳ ವಿರುದ್ದ ಅವಿಶ್ವಾಸ ಗೊತ್ತುವಳಿ ಕ್ರಮಬದ್ಧವಾಗಿಲ್ಲ ಅಂತ ತಿರಸ್ಕೃತವಾಗಿದೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಸಭಾಪತಿಗಳು ಸದಸ್ಯರಿಗೆ ಹಿಂಬರಹ ನೀಡಿದ್ದಾರೆ. ಹಾಗಾಗಿ ಕಲಾಪದಲ್ಲಿ ಆ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *