ಭೇಟಿ ನೆಪದಲ್ಲಿ ಕಮಲ್ ಹಾಸನ್ ಕಾರಿನ ಗಾಜು ಪುಡಿಗೈದ ವ್ಯಕ್ತಿ!

ಚೆನ್ನೈ: ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಕಾರಿನ ಮೇಲೆ ವ್ಯಕ್ತಿಯೊಬ್ಬ ಭಾನುವಾರ ದಾಳಿ ನಡೆಸಿದ್ದಾನೆ. ಕಂಚೀಪುರಂನಲ್ಲಿ ಚುನಾವಣಾ ಪ್ರಚಾರ ನಡೆಸಿ ಹೋಟೆಲ್‍ಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಜರುಗಿದೆ.

ಕಮಲ್ ಹಾಸನ್‍ರನ್ನು ಭೇಟಿ ಮಾಡಲು ಬಯಸಿ ವ್ಯಕ್ತಿಯೋರ್ವ ಕಾರನ್ನು ಅಡ್ಡ ಹಾಕಿ ಕಿಟಕಿ ಗ್ಲಾಸ್ ನ್ನು ಹೊಡೆದು ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ಎಂಎನ್‍ಎಂ ಕಾರ್ಯಕರ್ತರು ವ್ಯಕ್ತಿಯನ್ನು ರಕ್ತಬರುವಂತೆ ಹಿಗ್ಗಾಮುಗ್ಗ ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಘಟನೆ ವೇಳೆ ಕಮಲ್ ಹಾಸನ್‍ಗೆ ಯಾವುದೇ ರೀತಿಯ ಹಾನಿಯಾಗಿಲ್ಲ.

ಘಟನೆ ಕುರಿತಂತೆ ಎಂಎನ್‍ಎಂ ನಾಯಕ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಎಜಿ ಮೌರ್ಯರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕಾರಿನ ಕಿಟಕಿ ಗಾಜನ್ನು ವ್ಯಕ್ತಿ ಹೊಡೆದು ಹಾಕಿದ್ದಾರೆ. ಕಾರಿನಲ್ಲಿದ್ದ ಕಮಲ್ ಹಾಸನ್‍ರಿಗೆ ಯಾವುದೇ ರೀತಿಯ ಹಾನಿ ಆಗಿಲ್ಲ. ಇದೀಗ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇಂತಹದಕ್ಕೆಲ್ಲಾ ಪಕ್ಷ ಹೆದರುವುದಿಲ್ಲ ಎಂದು ಹೇಳಿದ್ದಾರೆ.

234 ಸದಸ್ಯರ ತಮಿಳುನಾಡು ವಿಧಾನಸಭೆಯ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಮತ ಎಣಿಕೆಯನ್ನು ಮೇ 2 ರಂದು ನಡೆಸಲಾಗುತ್ತದೆ. ಕಳೆದ ವಾರ ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ 2021ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

Comments

Leave a Reply

Your email address will not be published. Required fields are marked *