ಭೂ ಮಾಪಕಿಗೆ ಕೊರೊನಾ- ಮಿನಿ ವಿಧಾನಸೌಧ ಸೀಲ್‍ಡೌನ್

ಚಾಮರಾಜನಗರ: ಜಿಲ್ಲೆಯ ಮಿನಿ ವಿಧಾನಸೌಧದ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೂ ಮಾಪಕಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು ಮಿನಿವಿಧಾನಸೌಧವನ್ನು ಸಂಪೂರ್ಣ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದೇ ಕಟ್ಟಡದಲ್ಲಿ ತಾಲೂಕು ಕಚೇರಿಯು ಇದ್ದು, ಇಂದು ತಾಲೂಕು ಕಚೇರಿ ಮತ್ತು ಮಿನಿ ವಿಧಾನಸೌಧಕ್ಕೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆರ್.ರವಿ ಆದೇಶಿಸಿದ್ದಾರೆ. ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 33 ವರ್ಷ ವಯಸ್ಸಿನ ಭೂ ಮಾಪಕಿಗೆ ಕಳೆದ ವಾರ ಜ್ವರ ತಲೆನೋವು ಕಾಣಿಸಿಕೊಂಡಿತ್ತು.

ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ತಲೆನೋವು ಕಡಿಮೆ ಆಗದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ಫೀವರ್ ಕ್ಲಿನಿಕ್‍ಗೆ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ಅವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ತಾಲೂಕು ಕಚೇರಿ ಮತ್ತು ಮಿನಿ ವಿಧಾನಸೌಧ ಕಟ್ಟಡಕ್ಕೆ ಈಗಾಗಲೇ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

ಇದೀಗ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಜ್ವರ ಹಾಗೂ ತಲೆನೋವು ಇದ್ದು, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕೊಟ್ಟಿದ್ದರೂ ಸಹ ಮಹಿಳೆ ಪರೀಕ್ಷಾ ವರದಿ ಬರುವ ಮುನ್ನ ಕಚೇರಿಯಲ್ಲಿ ಮೂರ್ನಾಲ್ಕು ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ಕೆಲವು ರೈತರ ಜಮೀನುಗಳಿಗೂ ಭೇಟಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಸುಮಾರು 10 ಜನ ಬಂದಿದ್ದು, ಅವರನ್ನೆಲ್ಲಾ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಹಂತದ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮಹಿಳೆ ವಾಸ ಮಾಡುತ್ತಿದ್ದ ನಗರದ ಭಗೀರಥನಗರ ಹೊಸಬಡಾವಣೆ 5ನೇ ಕ್ರಾಸನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ. ಅಲ್ಲದೆ ಮಹಿಳೆ ವಾಸಿಸುತ್ತಿದ್ದ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

Comments

Leave a Reply

Your email address will not be published. Required fields are marked *