ಭಾರೀ ಟೀಕೆಗೆ ಮಣಿದ ಕೇರಳ ಸರ್ಕಾರ – ವಿವಾದಾತ್ಮಕ ಪೊಲೀಸ್‌ ಕಾಯ್ದೆ ಜಾರಿ ಇಲ್ಲ

ತಿರುವನಂತಪುರಂ: ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಾತ್ಮಕ ಪೊಲೀಸ್‌ ಕಾಯ್ದೆಯನ್ನು ಜಾರಿ ಮಾಡದಿರಲು ಕೇರಳದ ಎಲ್‌ಡಿಎಫ್‌ ಸರ್ಕಾರ ನಿರ್ಧರಿಸಿದೆ.

ಈ ಕಾಯ್ದೆ ಜಾರಿಯ ಬಗ್ಗೆ ವಿವಿಧ ವಲಯದಿಂದ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಎಲ್‌ಡಿಎಫ್‌ ಬೆಂಬಲಿಗರು ಸುಗ್ರೀವಾಜ್ಞೆ ಬಗ್ಗೆ ವ್ಯಕ್ತಪಡಿಸಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ‌ ವಿಜಯನ್‌ ಹೇಳಿದ್ದಾರೆ.

ಮುಂದಿನ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಪಕ್ಷಗಳ ಜೊತೆ ಗಂಭೀರ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಾಯ್ದೆಯಲ್ಲಿ ಏನಿತ್ತು?
ಆಡಳಿತರೂಢ ಎಲ್‌ಡಿಎಫ್‌ ಸರ್ಕಾರ ಕೇರಳ ಪೊಲೀಸ್‌ ಕಾಯ್ದೆಗೆ ಹೊಸದಾಗಿ ಸೆಕ್ಷನ್‌118(ಎ) ಸೇರಿಸಿ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ವ್ಯಕ್ತಿಯೊಬ್ಬ ಬೇರೊಬ್ಬ ವ್ಯಕ್ತಿಗೆ ಯಾವುದೇ ಸಂವಹನ ವಿಧಾನದ ಮೂಲಕ ನಿಂದನೆ ಮಾಡಿದರೆ ಅಥವಾ ಬೆದರಿಕೆ ಹಾಕಿದರೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಕಾಯ್ದೆ ಅವಕಾಶ ನೀಡುತ್ತಿತ್ತು.

ಕೋವಿಡ್‌ 19 ಹಿನ್ನೆಲೆಯಲ್ಲಿ ಈಗ ಅಧಿವೇಶನ ನಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆಯನ್ನು ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದ್ದು, ಶನಿವಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಸಹಿ ಹಾಕಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವವಾಗಿ ವ್ಯಕ್ತಿಗಳ ನಿಂದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಈ ಕಾಯ್ದೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಮರ್ಥಿಸಿಕೊಂಡಿದ್ದರು.

ಸುಗ್ರೀವಾಜ್ಞೆಯ ಮೂಲಕ ಕಾಯ್ದೆ ಜಾರಿಗೊಳಿಸಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಎಡಪಕ್ಷಗಳಿಂದಲೇ ಭಾರೀ ಟೀಕೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಜನರು ಕೇರಳದಲ್ಲಿ ಪೊಲೀಸ್‌ ರಾಜ್ಯ ನಿರ್ಮಾಣವಾಗುತ್ತಿದೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆ ಜಾರಿ ಮಾಡಲಾಗುತ್ತದೆ ಎಂದು ಟೀಕಿಸಿ ತರಾಟೆಗೆ ತೆಗೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *