ಭಾರತ್ ಬಂದ್‌ಗೆ ಸೈನಿಕನ ಬೆಂಬಲ – ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ಬಹುತೇಕ ಯಶ್ವಸಿಯಾಗಿದೆ.

ಭಾರತ ಬಂದ್ ಹಿನ್ನೆಲೆಯಲ್ಲಿ ನಸುಕಿನ ಜಾವದಿಂದಲೇ ರೈತ ಮುಖಂಡರು, ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಚೆನ್ನಮ್ಮ ಸರ್ಕಲ, ಹೊಸೂರ ಸರ್ಕಲ್, ಹೊಸೂರು ಡಿಪೋ ಮುಂದೆ ಪ್ರತಿಭಟನೆ ನಡೆಸಿದರು.

 

ಚೆನ್ನಮ್ಮ ಸರ್ಕಲ್ ಬಳಿ ಮುಂಜಾನೆ ಹೋರಾಟಗಾರರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ರೈತ ಮುಖಂಡರು ಹೊಸೂರು ಡಿಪೋ ಮುಂದೆ ಸಾರಿಗೆ ಬಸ್ ಗಳು ಹೊರಹೋಗದಂತೆ ತಡೆದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಲವಂತವಾಗಿ ಬಂದ್ ಮಾಡಿದಂತೆ ಪೊಲೀಸರು ಎಚ್ಚರಿಕೆ ನೀಡಿದ ಪರಿಣಾಮ ಹೋರಾಟಗಾರರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ‌ ಮಾತಿನ ಚಕಮಕಿ‌ ನಡೆಯಿತು.

ಸೈನಿಕನ ಬೆಂಬಲ
ಚೆನ್ನಮ್ಮ‌ ಸರ್ಕಲ್ ಬಳಿ ಕಾಂಗ್ರೆಸ್‌ನ ಕಿಸಾನ್‌ ಮೋರ್ಚಾ ಕಾರ್ಯಕರ್ತರು ಹಾಗೂ ರೈತ ಮುಖಂಡರು ನಡೆಸುತ್ತಿದ್ದ ಪ್ರತಿಭಟನೆಗೆ ರಜೆ ಮೇಲೆ ಊರಿಗೆ ಆಗಮಿಸಿದ್ದ ಸೈನಿಕರೊಬ್ಬರು ಸಮವಸ್ತ್ರದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

 

ಸದ್ಯ ಅಸ್ಸಾಂ ಸಿಗ್ನಲ್‌ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಕುಂದಗೋಳ ತಾಲೂಕಿನ ಬರದ್ವಾಡ್ ಗ್ರಾಮದ ರಮೇಶ್‌ ಮಾಡಳ್ಳಿ 25 ದಿನಗಳ ಕಾಲ ರಜೆಯಲ್ಲಿ ಊರಿಗೆ ಬಂದಿದ್ದು ಪ್ರತಿಭಟನೆಯನ್ನು ಭಾಗವಹಿಸಿದ್ದಾರೆ.

ಈ ವೇಳೆ ಮಾತನಾಡಿದ ಸೈನಿಕ ರಮೇಶ್ ನಾನು ರೈತನ ಮಗ. ಹೀಗಾಗಿ ರೈತರ ಹೋರಾಟಕ್ಕೆ ಬೆಂಬಲ‌ ನೀಡುತ್ತಿದ್ದೇನೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳು ರೈತರಿಗೆ ಮಾರಕವಾಗಿ ಎಂದರು.

ಇನ್ನೂ ರಜೆ ಆಗಮಿಸಿದ ಸೈನಿಕ ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪೊಲೀಸರು ರಮೇಶ್‌ ಅವರಿಂದ ಮಾಹಿತಿ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸೇವಾ ಅವಧಿ ಜನವರಿಯಲ್ಲಿ ಕೊನೆಯಾಗಲಿದ್ದು, ಸೇವೆ ವಿಸ್ತರಿಸಲು ನಾನು ಅರ್ಜಿ ಹಾಕಿದ್ದೇನೆ ಎಂದು ರಮೇಶ್‌ ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *