ಭಾರತದ ಸೇನೆಯಿಂದ ಗುಂಡಿನ ದಾಳಿ, ಈ ಅಪಾಯಕಾರಿ ನಡೆಯನ್ನು ನಿಲ್ಲಿಸಿ – ಚೀನಾ ಆಗ್ರಹ

ನವದೆಹಲಿ: ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಎಲ್‌ಎಸಿ ಬಳಿ ಭಾರತ ಮತ್ತು ಚೀನಾದ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಚೀನಾ ಸರ್ಕಾರ ಅಧಿಕೃತ ಹೇಳಿಕೆ ನೀಡಿದ್ದರೆ ಭಾರತದ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಪ್ರಕಟಣೆ ಹೊರ ಬಂದಿಲ್ಲ. ಸಾವು ನೋವು ಸಂಭವಿಸಿದ ಬಗ್ಗೆ ಯಾವುದೇ ವರದಿಯಾಗಿಲ್ಲ.

ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಅಕ್ರಮವಾಗಿ ವಾಸ್ತವ ಗಡಿರೇಖೆ (ಎಲ್‌ಎಸಿ) ಪ್ರವೇಶಿಸಿ ಗುಂಡಿನ ದಾಳಿ ನಡೆಸಿದೆ ಎಂದು ಪೀಪಲ್‌ ಲೀಬರೇಷನ್‌ ಆರ್ಮಿಯ(ಪಿಎಲ್‌ಎ) ಪಶ್ಚಿಮ ಕಮಾಂಡ್‌ನ ಹಿರಿಯ ಕರ್ನಲ್ ಝಾಂಗ್ ಸುಯಿಲಿ ಸೋಮವಾರ ರಾತ್ರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯನ್ನು ಆಧಾರಿಸಿ ಚೀನಾ ಕಮ್ಯೂನಿಸ್ಟ್‌ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಭಾರತೀಯ ಸೈನಿಕರು ನಡೆಸಿದ ದಾಳಿಗೆ ಪ್ರತಿಯಾಗಿ ನಾವು ಗುಂಡಿನ ದಾಳಿ ನಡೆಸಿದ್ದೇವೆ. ಭಾರತ ಸೈನಿಕರು ಪದೇ ಪದೇ ಎಲ್‌ಎಸಿಯನ್ನು ಉಲ್ಲಂಘಿಸುತ್ತಿದೆ. ಭಾರತ ಕೂಡಲೇ ಈ ಅಪಾಯಕಾರಿ ನಡೆಯನ್ನು ನಿಲ್ಲಿಸಬೇಕೆಂದು ಚೀನಾ ಆಗ್ರಹಿಸಿದೆ. ಎಲ್‌ಎಸಿ ಉಲ್ಲಂಘಿಸಿದ ಸೈನಿಕರ ಮೇಲೆ ಭಾರತ ಶೀಘ್ರವೇ ಶಿಸ್ತುಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿ ಘಟನೆ ನಡೆಯದಂತೆ ವರ್ತಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಸೇನೆಯ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಕಡೆಯಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ಎಲ್‌ಎಸಿ ಬಳಿ ಭಾರತ ಸೇನೆ ಗಸ್ತು ತಿರುಗುತ್ತಿರುವುದನ್ನು ನೋಡಿ ಭಯಗೊಂಡು ಚೀನಾ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ನಡೆಸಿದೆ ಎಂದು ತಿಳಿಸಿದೆ.

ಕೆಲ ದಿನಗಳ ಹಿಂದೆ ಪಾಂಗಾಂಗ್ ಸರೋವರ ಬಳಿ ಚೀನಾ ಸೇನೆ ಯಥಾಸ್ಥಿತಿ ಉಲ್ಲಂಘಿಸುವ ಪ್ರಯತ್ನ ಮಾಡಿತ್ತು. ಈ ಕುತಂತ್ರಿ ನಡೆಯನ್ನು ಮೊದಲೇ ತಿಳಿದಿದ್ದ ಭಾರತ ಸೇನೆ ಯಶಸ್ವಿಯಾಗಿ ಪಿಎಲ್‌ಎ ಸೈನಿಕರನ್ನು ಹಿಂದಕ್ಕೆ ಕಳುಹಿಸಿತ್ತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ನಡುವೆ ಮಾತುಕತೆ ನಡೆದ ಕೇವಲ ಮೂರೇ ದಿನಗಳಲ್ಲಿ ಗುಂಡಿನ ಚಕಮಕಿ ನಡೆದಿದೆ. ರಷ್ಯಾದ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಉಭಯ ಸಚಿವರ ನಡುವೆ ಮಾತುಕತೆ ನಡೆದಿತ್ತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಹ ವಾರಾಂತ್ಯದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

 ಗಲ್ವಾನ್‌ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 21 ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲಿಯೂ ಸಾವು–ನೋವು ಸಂಭವಿಸಿತ್ತು. ಆದರೆ ಚೀನಾ ಇಲ್ಲಿಯವರೆಗೂ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದನ್ನು ತಿಳಿಸಿಲ್ಲ.

ಈಗ ಗುಂಡು ಹಾರಿಸಬಹುದು:
ಆತ್ಮ ರಕ್ಷಣೆಗಾಗಿ ಸಿಡಿಎಸ್(ಚೀಫ್ ಡಿಫೆನ್ಸ್ ಸ್ಟಾಫ್) ಬಿಪಿನ್‌ ರಾವತ್‌ ಮತ್ತು ಮೂರು ಸೇನೆಯ ಮುಖ್ಯಸ್ಥರು ಆತ್ಮರಕ್ಷಣೆಗಾಗಿ ಚೀನಾ ಗಡಿಯಲ್ಲಿ ಗುಂಡು ಹಾರಿಸಲು ಸೈನಿಕರಿಗೆ ಅನುಮತಿ ನೀಡಿದ್ದರು. ಗಲ್ವಾನ್‌ ಘರ್ಷಣೆಯ ಸಂದರ್ಭದಲ್ಲಿ ಚೀನಿ ಸೈನಿಕರು ಮೊಳೆಗಳನ್ನು ವೆಲ್ಡ್‌ ಮಾಡಿದ ಬೇಸ್‌ ಬಾಲ್‌ ಬ್ಯಾಟ್‌ನಂತಿರುವ ಕಬ್ಬಿಣದ ರಾಡ್‌ಗಳಿಂದ ಭಾರತೀಯ ಸೇನೆಯ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಸೈನಿಕರಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ.

ಒಪ್ಪಂದ ಮಾಡಿಕೊಂಡಿದ್ದು ಯಾಕೆ?
ಭಾರತ ಮತ್ತು ಚೀನಾ ನಡುವೆ ಅಂತಾರಾಷ್ಟ್ರೀಯ ಗಡಿ ರೇಖೆ ಇಲ್ಲದ ಕಾರಣ ಗಡಿಯಲ್ಲಿ ಈ ರೀತಿ ಕಿತ್ತಾಟಗಳು ನಡೆಯುತಿತ್ತು. ಎರಡು ದೇಶಗಳ ಗಡಿಯನ್ನು ವಾಸ್ತವ ಗಡಿ ರೇಖೆಯಿಂದ(ಎಲ್‌ಎಸಿ – ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಗುರುತಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಭಾರತ ಮತ್ತು ಚೀನಾದ ನಡುವಿನ ಗಡಿಗಳು ನಿರ್ಧಾರವಾಗಿಲ್ಲ. ಹೀಗಾಗಿ ಹಲವು ಬಾರಿ ಎರಡು ಕಡೆಯ ಸೈನಿಕರು ಗಡಿಯಲ್ಲಿ ಪಹರೆ ಕಾಯುತ್ತಿದ್ದಾಗ ಕಿತ್ತಾಟಗಳು ನಡೆಯುತ್ತಿದ್ದವು. ಎರಡು ಕಡೆಯಿಂದಲೂ ಪ್ರತಿರೋಧಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ 1993, 1996ರಲ್ಲಿ ಭಾರತ ಮತ್ತು ಚೀನಾ ನಡುವೆ ಒಪ್ಪಂದ ನಡೆಯಿತು.

1993ರ ಒಪ್ಪಂದದ ಪ್ರಕಾರ ಎಲ್‌ಎಸಿ ದಾಟಿ ಯಾರೇ ಒಳಬಂದರೂ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಪ್ರಕಾರ ಎಲ್‌ಎಸಿಯ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಎರಡು ದೇಶಗಳು ಯಾವುದೇ ಸ್ಫೋಟ ನಡೆಸಬಾರದು. ಗುಂಡಿನ ದಾಳಿ ನಡೆಸಕೂಡದು ಎಂಬ ಒಪ್ಪಂದಕ್ಕೆ ಬರಲಾಗಿದೆ. ಇಲ್ಲಿಯವರೆಗೆ ಚೀನಾ ಗಡಿಯಲ್ಲಿ ಭಾರತದ ಸೈನಿಕರು ಈ ಒಪ್ಪಂದಕ್ಕೆ ಬದ್ಧವಾಗಿದ್ದರು. ಆದರೆ ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಗಡಿ ಒಪ್ಪಂದ ರದ್ದು ಮಾಡಿದ್ದು ಸರ್ಕಾರ ಭಾರತೀಯ ಸೇನೆಗೆ ಪೂರ್ಣ ಅಧಿಕಾರವನ್ನು ನೀಡಿದೆ.

Comments

Leave a Reply

Your email address will not be published. Required fields are marked *