– ನನ್ನ ಕೊಂದ್ರೂ ಸರಿ ಭಾರತದ ವಿರುದ್ಧ ಸುಳ್ಳು ಹೇಳಲ್ಲ
ನವದೆಹಲಿ: ಅಕ್ರಮವಾಗಿ ನಮ್ಮ ಗಡಿಯೊಳಗೆ ಪ್ರವೇಶ ಮಾಡಿದ್ದಾನೆ ಎಂದು ನೇಪಾಳ ಸೇನೆ ಎಳೆದುಕೊಂಡು ಹೋಗಿದ್ದ ಭಾರತದ ಪ್ರಜೆಯನ್ನು ನೇಪಾಳ ಸರ್ಕಾರ ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿದ ವ್ಯಕ್ತಿಯನ್ನು ಲಗಾನ್ ಕಿಶೋರ್ ಎಂದು ಗುರುತಿಸಲಾಗಿದ್ದು, ನೇಪಾಳದಿಂದ ಬಿಡುಗಡೆಯಾಗಿ ಭಾರತೀಯ ಸೇನೆಯ ನೆರವಿನಿಂದ ತನ್ನ ಸ್ವಂತ ಊರು ಬಿಹಾರಕ್ಕೆ ವಾಪಸ್ ಬಂದಿದ್ದಾರೆ. ಶುಕ್ರವಾರ ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ಗುಂಡಿನ ದಾಳಿಯಾಗಿತ್ತು. ಇದಾದ ನಂತರ ನೇಪಾಳ ಸೇನೆ ಭಾರತೀಯ ಪ್ರಜೆಯನ್ನು ಬಂಧಿಸಿತ್ತು.
https://twitter.com/ANI/status/1271673105207853056
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಿಶೋರ್, ನಾನು ಮತ್ತು ನನ್ನ ಮಗ ನೇಪಾಳಿ ಪ್ರಜೆಯಾಗಿರುವ ನಮ್ಮ ಸೊಸೆಯನ್ನು ಭೇಟಿಯಾಗಲು ನೇಪಾಳ ಮತ್ತು ಭಾರತದ ಗಡಿ ಭಾಗಕ್ಕೆ ಹೋಗಿದ್ದವು. ಈ ವೇಳೆ ನೇಪಾಳದ ಕಡೆಯಿಂದ ಬಂದ ಭದ್ರತಾ ಸಿಬ್ಬಂದಿ ನನ್ನ ಮಗನಿಗೆ ಸುಖಾಸುಮ್ಮನೆ ಹೊಡೆದರು. ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಕೇಳಿದಾಗ ನನ್ನ ಸುಮ್ಮನಿರು ಎಂದು ಹೆದರಿಸಿದರು. ಜೊತೆಗೆ ಇನ್ನೂ ಹತ್ತು ಸಿಬ್ಬಂದಿಯನ್ನು ಕರೆಸಿ ಗಾಳಿಯಲ್ಲಿ ಗುಂಡಿ ಹಾರಿಸಿದರು ಎಂದು ಹೇಳಿದ್ದಾರೆ.

ಗುಂಡು ಹಾರಿಸಿದ ತಕ್ಷಣ ನಾವು ಭಾರತದ ಕಡೆ ಓಡಿ ಬಂದೆವು. ಆಗ ಅವರು ನಮ್ಮನ್ನು ಭಾರತದ ಕಡೆಯಿಂದ ನೇಪಾಳದ ಕಡೆಗೆ ಎಳೆದುಕೊಂಡು ಹೋದರು. ಅಲ್ಲಿ ನಮ್ಮ ಮೇಲೆ ಬಂದೂಕುಗಳಿಂದ ಹಲ್ಲೆ ಮಾಡಿ ನೇಪಾಳದ ಸಂಗ್ರಂಪುರಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಾವು ನಿಮ್ಮನ್ನು ನೇಪಾಳ ಗಡಿಯಿಂದ ಕರೆದುಕೊಂಡು ಬಂದಿದ್ದೇವೆ ಎಂದು ತಪ್ಪೊಪ್ಪಿಕೊಳ್ಳಿ ಎಂದು ಒತ್ತಾಯ ಮಾಡಿದರು. ಆದರೆ ನಾನು, ನೀವು ನನ್ನನ್ನು ಕೊಂದರು ಆ ರೀತಿ ಹೇಳುವುದಿಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಶುಕ್ರವಾರ ನೇಪಾಳದಲ್ಲಿ ಇದ್ದ ತಮ್ಮ ಸೊಸೆಯನ್ನು ನೋಡಲು ಹೋದ ಸ್ಥಳೀಯರ ಮೇಲೆ ನೇಪಾಳ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರು. ವರದಿಗಳ ಪ್ರಕಾರ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಮಾತನಾಡಿರುವ ಡಿಜಿ ಎಸ್‍ಎಸ್‍ಬಿ ಕುಮಾರ್ ರಾಜೇಶ್ ಚಂದ್ರ ಅವರು, ಘಟನೆಯಲ್ಲಿ ಒಟ್ಟು ಮೂವರು ಗಾಯಗೊಂಡಿದ್ದು, ಅವರನ್ನು ವಿಕೇಶ್ ಯಾದವ್, ಉಮೇಶ್ ರಾಮ್ ಮತ್ತು ಉದಯ್ ಠಾಕೂರ್ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ, ಭಾರತವು ನೇಪಾಳದೊಂದಿಗೆ ಅತ್ಯಂತ ಬಲವಾದ ಸಂಬಂಧವನ್ನು ಹೊಂದಿದೆ. ಜೊತೆಗೆ ದೃಢವಾದ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಬಂಧಗಳನ್ನು ಹೊಂದಿದೆ. ನೇಪಾಳದೊಂದಿಗೆ ನಮ್ಮ ಸಂಬಂಧ ಯಾವಾಗಲೂ ಪ್ರಬಲವಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಸದೃಢವಾಗಿರುತ್ತದೆ ಎಂದು ಹೇಳಿದ್ದಾರೆ.

Leave a Reply