ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆ

– ರಷ್ಯಾ ತಯಾರಿಸಿರುವ ವಿಶ್ವದ ಮೊದಲ ಕೊರೊನಾ ಲಸಿಕೆ

ಹೈದರಾಬಾದ್: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನವನ್ನು ವಿಸ್ತರಿಸಿದ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿತ್ತು. ಇದೆಲ್ಲದರ ಮಧ್ಯೆ ಇದೀಗ ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆಯು ರಷ್ಯಾದಿಂದ ಬಂದಿದ್ದು, ಹೈದರಾಬಾದ್‍ಗೆ ಆಗಮಿಸಿದೆ.

ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಮೊದಲ ಹಂತದ 1.50 ಲಕ್ಷ ಡೋಸ್ ಲಸಿಕೆ ಈಗ ಹೈದರಾಬಾದ್ ಗೆ ಆಗಮಿಸಿದೆ. ಇನ್ನೂ 30 ಲಕ್ಷ ಡೋಸ್ ಈ ತಿಂಗಳ ನಂತರ ಬರಲಿದೆ. ಈ ಲಸಿಕೆಯ ಡೋಸ್‍ಗಳನ್ನು ರಷ್ಯನ್ ವ್ಯಾಕ್ಸಿನ್ ಪಾರ್ಟರ್ ಆಗಿರುವ ಡಾ.ರೆಡ್ಡಿ ಲ್ಯಾಬರೋಟರಿಯಲ್ಲಿ ದಾಸ್ತಾನು ಮಾಡಲಾಗಿದೆ.

ಕಸೌಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬರೋಟರಿಯಿಂದ ಅನುಮತಿ ಪಡೆದ ಬಳಿಕ ಡಾ.ರೆಡ್ಡಿ ಲ್ಯಾಬರೋಟರಿ ಸ್ಪುಟ್ನಿಕ್ ವಿ ಲಸಿಕೆಯನ್ನು ವಿತರಿಸಲಿದೆ.

ಈ ಕುರಿತು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲಾಯ್ ಕುಡಶೇವ್ ಅವರು ಟ್ವೀಟ್ ಮಾಡಿದ್ದು, ಕೋವಿಡ್ ಎದುರಿಸಲು ರಷ್ಯಾ ಮತ್ತು ಭಾರತ ಜಂಟಿ ಪ್ರಯತ್ನಗಳನ್ನು ಮುಂದುವರಿಸಿದ್ದು, ಮಾರಣಾಂತಿಕ ಎರಡನೇ ಅಲೆ ತಗ್ಗಿಸಲು ಹಾಗೂ ಜೀವ ಉಳಿಸಲು ಭಾರತ ಸರ್ಕಾರವನ್ನು ಬೆಂಬಲಿಸಲು ಈ ಕ್ರಮ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಉತ್ಪಾದನೆ ಸಹ ಶೀಘ್ರದಲ್ಲೇ ಆರಂಭವಾಗಲಿದೆ. ಬಳಿಕ ಪ್ರತಿ ವರ್ಷ 850 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ ಎಂದು ತಿಳಿಸಿದ್ದಾರೆ. ಭಾರತ ಔಷಧ ನಿಯಂತ್ರಣ ಮಂಡಳಿಯು ಏಪ್ರಿಲ್ 12ರಂದು ಸ್ಪುಟ್ನಿಕ್ ವಿ ಗೆ ಅನುಮತಿ ನೀಡಿದೆ. ಈ ಲಸಿಕೆ ಶೇ.91.6ರಷ್ಟು ಎಫಿಕೇಸಿ ಹೊಂದಿದೆ. ಸ್ಪುಟ್ನಿಕ್ ವಿ ಕೊರೊನಾ ವಿರುದ್ಧ ಹೋರಾಟದಲ್ಲಿನ ವಿಶ್ವದ ಮೊದಲ ಲಸಿಕೆಯಾಗಿದೆ. ಇದರ ಕ್ಲಿನಿಕಲ್ ಟ್ರಯಲ್ ಡಾಟಾ ಸಹ ದಿ ಲ್ಯಾನ್ಸೆಟ್ ನಲ್ಲಿ ಪ್ರಕಟವಾಗಿದೆ. ಈ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಸ್ಪಷ್ಟಪಡಿಸಿದೆ.

Comments

Leave a Reply

Your email address will not be published. Required fields are marked *