ಬ್ಲ್ಯಾಕ್ ಫಂಗಸ್ ಬಂದ್ರೆ ಮಾಹಿತಿ ನೀಡಿ, ಮುಚ್ಚಿಟ್ಟರೆ ಕಾನೂನು ಬಾಹಿರ – ಸುಧಾಕರ್

– ಬ್ಲ್ಯಾಕ್ ಫಂಗಸ್ ಬಂದವರಿಗೆ ಉಚಿತ ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿ ಯಾರಿಗೇ ಬ್ಲ್ಯಾಕ್ ಫಂಗಸ್ ಸೋಂಕು ಬಂದರೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಇದನ್ನು ಮುಚ್ಚಿಟ್ಟರೆ ಕಾನೂನು ಬಾಹಿರವಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್ ಕುರಿತು ವಿವಿಧ ವಿಭಾಗಗಳ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಬ್ಲ್ಯಾಕ್ ಫಂಗಸ್ ಕೆಲವರಲ್ಲಿ ಕಾಣಿಸಿಕೊಂಡಿದೆ. ಆದರೆ ಕೋವಿಡ್ ನಂತೆ ಈ ಸೋಂಕು ಹರಡುತ್ತದೆ ಎಂಬುದು ಸುಳ್ಳು. ಇದು ಕೊರೊನಾಗೆ ಸಮನಾದ ರೋಗವಲ್ಲ. ಕೋವಿಡ್ ಗೆ ಒಳಗಾದ ಅತಿಯಾದ ಮಧುಮೇಹವಿರುವವರು ಅಧಿಕ ಸ್ಟೀರಾಯಿಡ್ ಔಷಧಿ ಪಡೆಯುವವರಿಗೆ ಇದು ಬರುತ್ತದೆ. ಎಚ್‍ಐವಿ, ಕ್ಯಾನ್ಸರ್, ಅಂಗಾಂಗ ಕಸಿ ಮಾಡಿಕೊಂಡಿರುವವರಿಗೆ ಬರುವ ಸಾಧ್ಯತೆ ಇರುತ್ತದೆ. ಇಂತಹವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದರು.


ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಶಿಲೀಂಧ್ರ ದಾಳಿ ಮಾಡಿ ಮೂಗಿಗೆ ಬರುತ್ತದೆ. ನಂತರ ಕಣ್ಣಿಗೆ ಹಾನಿ ಮಾಡುತ್ತದೆ. ಮೂಗಿಗೆ ಬಂದ ಕೂಡಲೇ ಎಚ್ಚರ ವಹಿಸಿ ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆಗಳಲ್ಲಿ ಹ್ಯುಮಿಡಿಫೈರ್ ನಲ್ಲಿ ನೀರನ್ನು ಬಳಸುವುದರಿಂದ ಬರುತ್ತಿದೆ ಎಂಬ ಅಂದಾಜಿದೆ. ಇದು ಯಾವ ಮೂಲದಿಂದ ಬರುತ್ತಿದೆ ಎಂದು ಪತ್ತೆ ಮಾಡಲು ತಜ್ಞರಿಗೆ ಸೂಚಿಸಲಾಗಿದೆ. ಈ ಬಗ್ಗೆ ತಜ್ಞರು ವರದಿ ಸಲ್ಲಿಸಲಿದ್ದು, ವರದಿ ಆಧಾರದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಬೌರಿಂಗ್ ನಲ್ಲಿ ಚಿಕಿತ್ಸೆ
ಬ್ಲ್ಯಾಕ್ ಫಂಗಸ್ ಗೆ ಆಂಪೊಟೆರಿಸಿನ್ ಔಷಧಿ ನೀಡುತ್ತಿದ್ದು, ಒಬ್ಬ ರೋಗಿಗೆ 40-60 ವೈಲ್ ಗಳು ಬೇಕಾಗುತ್ತವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1,050 ರಷ್ಟು ವೈಲ್ ಗಳ ಮಂಜೂರಾತಿ ನೀಡಿದ್ದು, 450 ವೈಲ್ ಬಂದಿದೆ. ಜೊತೆಗೆ 20 ಸಾವಿರ ವೈಲ್ ಗೆ ಆದೇಶಿಸಲಾಗಿದೆ. ನಿನ್ನೆವರೆಗೆ 97 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಮುಂದೆ ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್ ಕಾಲೇಜು, ಕಲಬುರ್ಗಿ ಜಿಮ್ಸ್, ಹುಬ್ಬಳ್ಳಿ ಕಿಮ್ಸ್, ಮಂಗಳೂರು ವೆನ್ ಲಾಕ್, ಉಡುಪಿ ಕೆಎಂಸಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಆಯಾ ಜಿಲ್ಲೆಗಳ ಜನರು ಅಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದರು.

ವೈದ್ಯರ ಸಲಹೆ ಇಲ್ಲದೆ ಸ್ಟೀರಾಯಿಡ್ ನೀಡುವಂತಿಲ್ಲ. ಮನೆ ಆರೈಕೆಯಲ್ಲಿರುವವರಿಗೆ ಸರ್ಕಾರ ಸ್ಟೀರಾಯಿಡ್ ನೀಡುತ್ತಿಲ್ಲ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿರುವ ಬ್ಲ್ಯಾಕ್ ಫಂಗಸ್ ಗೊಳಗಾದ ರೋಗಿಗಳ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ಅದರಂತೆ ಔಷಧಿ ನೀಡಲಾಗುತ್ತದೆ. ಕೋವಿಡ್ ಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಪೋಸ್ಟ್ ಕೋವಿಡ್ ರೋಗ ಆಗಿರುವುದರಿಂದ ಇದಕ್ಕೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *