ಬ್ಲ್ಯಾಕ್ ಫಂಗಸ್ ಔಷಧಿಯಿಂದ ಅಡ್ಡಪರಿಣಾಮ – ಇಂಜೆಕ್ಷನ್ ಪಡೆಯಲು ಸೋಂಕಿತರ ನಿರಾಕರಣೆ

– ರಿಮ್ಸ್ ಆಸ್ಪತ್ರೆಯಲ್ಲಿನ ಸೋಂಕಿತರಿಗೆ ಕಾಣಿಸಿಕೊಂಡ ಅಡ್ಡಪರಿಣಾಮ
– ಇಂಜೆಕ್ಷನ್ ಪಡೆದ ಬಳಿಕ ಜ್ವರ, ಮೈಕೈ ನೋವು, ವಾಂತಿ

ರಾಯಚೂರು: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಅಡ್ಡಪರಿಣಾಮಗಳಿಗೆ ಹೆದರಿ ಔಷಧಿಯನ್ನೇ ನಿರಾಕರಿಸುತ್ತಿದ್ದಾರೆ.

ಸರ್ಕಾರ ಸರಬರಾಜು ಮಾಡುತ್ತಿರುವ ಅಂಪೋಟೆರಿಸಿನ್ ಬಿ ಇಂಜೆಕ್ಷನ್ ತಗೆದುಕೊಳ್ಳಲು ಹೆದರಿದ್ದಾರೆ. ಮೊದಲೇ ಸೋಂಕಿನ ನೋವು ಇರುವಾಗ ಔಷಧಿಯೂ ನೋವು ಕೊಡುತ್ತಿರುವುದಕ್ಕೆ ಸೋಂಕಿತರು ಈ ಮೊದಲು ಕೊಡುತ್ತಿದ್ದ ಔಷಧಿಯನ್ನೇ ಕೊಡಿ ಅಂತ ಅಂಗಲಾಚುತ್ತಿದ್ದಾರೆ.

ಕೋವಿಡ್ ಬಳಿಕ ಅತೀಯಾದ ಸ್ಟೆರೈಡ್ ಬಳಕೆ ಸೇರಿ ಬೇರೆ, ಬೇರೆ ಕಾರಣಕ್ಕೆ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಸೋಂಕು ಈಗ ಸರ್ಕಾರಕ್ಕೂ ದೊಡ್ಡ ತಲೆನೋವಾಗಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಸರ್ಕಾರ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿರುವ ಅಂಪೋಟೆರಿಸಿನ್ ಬಿ ಇಂಜೆಕ್ಷನ್ ಸೋಂಕಿತರ ಮೇಲೆ ಅಡ್ಡಪರಿಣಾಮ ಬೀರುತ್ತಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಇಂಜೆಕ್ಷನ್ ಪಡೆದ ಬಳಿಕ ತೀವ್ರ ಜ್ವರ, ವಾಂತಿ, ಮೈಕೈ ನೋವಿನ ಸಮಸ್ಯೆಗೆ ಒಳಗಾಗುತ್ತಿದ್ದು, ಇಂಜೆಕ್ಷನ್ ಬದಲಿಸುವಂತೆ ಒತ್ತಾಯಿಸಿದ್ದಾರೆ.

ಜಿಲ್ಲೆಗೆ ಇತ್ತೀಚಿಗೆ ಬಂದಿರುವ 2,000 ಅಂಪೋಟೆರಿಸಿನ್ ಬಿ ಔಷಧಿ ಅಡ್ಡ ಪರಿಣಾಮಕ್ಕೆ ಕಾರಣವಾಗಿದೆ. ಹೀಗಾಗಿ ಮೊದಲು ನೀಡುತ್ತಿದ್ದ, ಔಷಧಿಯನ್ನೇ ನೀಡುವಂತೆ ಸೋಂಕಿತರು ಕೇಳಿಕೊಳ್ಳುತ್ತಿದ್ದಾರೆ. ಸದ್ಯ ನೀಡುತ್ತಿರುವ ಇಂಜೆಕ್ಷನ್ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಅಂಪೋಟೆರಿಸಿನ್ ಬಿ, ಸ್ಟ್ರಾಂಗ್ ಔಷಧಿ ಆಗಿದ್ದು ನೋವು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ವತಃ ವೈದ್ಯರಾಗಿರುವ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.

ಜಿಲ್ಲೆಯಲ್ಲಿ 100 ಜನಕ್ಕೆ ಸೋಂಕು ತಗುಲಿದ್ದು 16 ಜನ ಗುಣಮುಖರಾಗಿದ್ದಾರೆ. 70ಕ್ಕೂ ಹೆಚ್ಚು ಜನರಿಗೆ ಮೊದಲ ಹಂತದ ಶಸ್ತ್ರಚಿಕಿತ್ಸೆಯಾಗಿದೆ. 20 ಜನರಿಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆಯಾಗಿದೆ. ಆದರೆ ಶಸ್ತ್ರಚಿಕಿತ್ಸೆ ಬಳಿಕವೂ ಇಂಜೆಕ್ಷನ್ ಪಡೆಯಬೇಕಿದ್ದು, ಔಷಧಿ ಅಡ್ಡಪರಿಣಾಮ ಬೀರುತ್ತಿರುವುದರಿಂದ ಸೋಂಕಿತರು ನೋವಿನ ಜೊತೆ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಒಬ್ಬೊಬ್ಬರನ್ನ ಮನವೊಲಿಸಿ ಇಂಜೆಕ್ಷನ್ ನೀಡಬೇಕಾದ ಅನಿವಾರ್ಯತೆ ವೈದ್ಯರಿಗೆ ಎದುರಾಗಿದೆ. ಆದರೆ ಅತಿಯಾದ ನೋವು, ಜ್ವರಕ್ಕೆ ಹೆದರಿರುವ ಸೋಂಕಿತರು ಇಂಜೆಕ್ಷನ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೋಂಕಿತರ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಸಮಸ್ಯೆಗೆ ಕಾರಣ ತಿಳಿದುಕೊಳ್ಳುವುದಾಗಿ ಹೇಳಿದ್ದಾರೆ.

ಸೋಂಕಿತರ ಸಮಸ್ಯೆ ಅರ್ಥವಾದರೂ ಏನೂ ಮಾಡದ ಸ್ಥಿತಿಯಲ್ಲಿ ವೈದ್ಯರಿದ್ದಾರೆ. ಸರ್ಕಾರ ಸರಬರಾಜು ಮಾಡುತ್ತಿರುವ ಔಷಧಿಯನ್ನ ನೀಡಲೇಬೇಕಾದ ಪರಿಸ್ಥಿತಿಯಿದೆ. ಒಂದು ರೋಗ ಗುಣಪಡಿಸಲು ಇನ್ನೊಂದು ನೋವಿನಿಂದ ಸೋಂಕಿತರು ಬಳಲುವಂತಾಗಿದೆ. ಈಗಲಾದರೂ ಸರ್ಕಾರ ಸೋಂಕಿತರಿಗಾಗುತ್ತಿರುವ ಅಡ್ಡಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಇದನ್ನೂ ಓದಿ: ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ 18 ಗೋವುಗಳ ರಕ್ಷಣೆ

Comments

Leave a Reply

Your email address will not be published. Required fields are marked *