ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದಿದ್ದೆವು- ಯೋಗೆಶ್ವರ್‌ಗೆ ರಾಜೂಗೌಡ ಟಾಂಗ್

ಯಾದಗಿರಿ: ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮೊದಲೇ ಹೇಳಿದ್ದೆವು. ಆದರೆ ಅವರು ನಮ್ಮನ್ನು ಕೇಳದೆ ಇಂತಹವರನ್ನು ಮಂತ್ರಿ ಮಾಡಿದರು. ಈಗ ಅವರೇ ದೆಹಲಿಗೆ ಹೋಗಿ ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಶಾಸಕ ರಾಜೂಗೌಡ ಪರೋಕ್ಷವಾಗಿ ಸಿ.ಪಿ.ಯೋಗಶ್ವರ್ ಗೆ ಟಾಂಗ್ ನೀಡಿದರು.

ಜಿಲ್ಲೆಯ ಹುಣಸಗಿ ತಾಲೂಕಿನ ರಾಜನ್ನಕೊಳ್ಳೂರಿನಲ್ಲಿ ಮಾತನಾಡಿದ ಅವರು, ಸೋತವರನ್ನು ಮಂತ್ರಿ ಮಾಡಿದ್ದಾರೆ, ಅವರಿಗೆ ಕ್ಷೇತ್ರವಿಲ್ಲ, ಜವಾಬ್ದಾರಿ ಇಲ್ಲ. ಅದಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ. ನಿಮಗೆ ಯಡಿಯೂರಪ್ಪ ಅವರ ಮಂತ್ರಿ ಮಂಡಲ ಬೇಕು, ಕೆಂಪುಗೂಟದ ಕಾರ್ ಬೇಕು ಆದರೆ ಯಡಿಯೂರಪ್ಪ ಬೇಡ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಕೆಲವು ನಾಯಕರನ್ನು ಪ್ರಶ್ನಿಸುತ್ತೇನೆ, ಇಂತಹ ಕೊರೊನಾ ಸಂಕಷ್ಟದಲ್ಲಿ ದೆಹಲಿಗೆ ಹೋಗುವ ಅವಶ್ಯಕತೆ ಇದೆಯಾ? ಸಣ್ಣತನದ ರಾಜಕೀಯ ಮಾಡೋಕೆ ನಿಮ್ಮ ಮನಸು ಹೇಗೆ ಒಪ್ಪುತ್ತೆ, ರಾಜ್ಯದ ಬಗ್ಗೆ ಅಷ್ಟು ಕಾಳಜಿ ಇರೋರು ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಇದ್ದಾಗ, ರಾಜ್ಯದಲ್ಲಿ ರೆಮ್‍ಡಿಸಿವಿರ್ ಕೊರತೆ ಇದ್ದಾಗ ದೆಹಲಿಗೆ ಹೋಗಬೇಕಿತ್ತು. ಹೈಕಮಾಂಡ್ ಇಂತಹವರ ಮಾತು ಕೇಳಬಾರದು, ಇಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪಕ್ಷದ ಮಾನ ಮರ್ಯಾದೆ ಹರಾಜು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *