ಬ್ರಿಸ್ಪೇನ್‌ ಟೆಸ್ಟ್‌ – ವಾಷಿಂಗ್ಟನ್‌ ಸುಂದರ್‌ ಬಳಿ ಇರಲಿಲ್ಲ ಪ್ಯಾಡ್ಸ್‌

– ಪಂದ್ಯ ಆರಂಭವಾದ ಬಳಿಕ ಖರೀದಿ
– ಪ್ಯಾಡ್ಸ್‌ ಹೊಂದಿಸಲು ಶ್ರಮ ಪಟ್ಟಿದ್ದ ತಂಡ

ಹೈದರಾಬಾದ್‌:  ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಪೇನ್‌ ‌ ಟೆಸ್ಟ್‌  ವೇಳೆ ಭಾರತದ ಐತಿಹಾಸಿಕ ಸಾಧನೆಯಲ್ಲಿ ಪಾತ್ರ ವಹಿಸಿದ್ದ ವಾಷಿಂಗ್ಟನ್‌ ಸುಂದರ್‌ ಬಳಿ ಬ್ಯಾಟಿಂಗ್‌ ಪ್ಯಾಡ್ಸ್‌ ಇರಲಿಲ್ಲ ಎಂಬ ವಿಚಾರ ಈಗ ಬಹಿರಂಗವಾಗಿದೆ..

ಹೌದು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಆಯ್ಕೆಯಾಗಿದ್ದ ಅಶ್ವಿನ್‌ ಗಾಯಗೊಂಡ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ ಸುಂದರ್‌ ಅವರು ಬ್ರಿಸ್ಪೇನ್‌ನಲ್ಲಿ ಮೊದಲ ಪಂದ್ಯವನ್ನು ಆಡಿದ್ದರು. ಈ ಸಂದರ್ಭದಲ್ಲಿ ಅವರ ಬಳಿ ಬ್ಯಾಟಿಂಗ್‌ ಪ್ಯಾಡ್ಸ್‌ ಇರಲಿಲ್ಲ ಎಂದು ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ವಾಷಿಂಗ್ಟನ್‌ ಸುಂದರ್‌ ಅವರಿಗೆ ಸರಿಯಾದ ಪ್ಯಾಡ್ಸ್‌ ಸಿಗಲು ಟೀಂ ಬಹಳ ಶ್ರಮ ಪಟ್ಟಿತ್ತು. ಟೆಸ್ಟ್‌ ಪಂದ್ಯ ಆರಂಭವಾದ ಬಳಿಕ ಅವರಿಗಾಗಿ ಹೊರಗಡೆ ಕ್ರಿಕೆಟ್‌ ಮಳಿಗೆಗೆ ತೆರಳಿ ಬಿಳಿ ಪ್ಯಾಡ್ಸ್‌ ಖರೀದಿಸಲಾಯಿತು ಎಂದು ಹೇಳಿದರು.

ನಮ್ಮ ಆಟಗಾರರ ಕೆಲ ಪ್ಯಾಡ್ಸ್‌ಗಳನ್ನು ಅವರಿಗೆ ನೀಡಲಾಯಿತು. ಆದರೆ ವಾಷಿಂಗ್ಟನ್‌ ಸುಂದರ್‌ ಎತ್ತರವಾಗಿರುವ ಕಾರಣ ಆ ಪ್ಯಾಡ್‌ಗಳು ಸರಿ ಹೊಂದಲಿಲ್ಲ. ಕೋವಿಡ್‌ ಭೀತಿಯಿಂದ ಆಸ್ಟ್ರೇಲಿಯಾದವರ ಬಳಿ ಕೇಳಲು ಹೋಗಲಿಲ್ಲ. ಹೀಗಾಗಿ ಪಂದ್ಯ ಆರಂಭವಾದ ಬಳಿಕ ತಂಡದ ಸಿಬ್ಬಂದಿ ಕ್ರಿಕೆಟ್‌ ಅಂಗಡಿಗೆ ತೆರಳಿ ಪ್ಯಾಡ್ಸ್‌ ಖರೀದಿ ಮಾಡಿದ್ದರು ಎಂದು ವಿವರಿಸಿದರು.

 

ವಾಷಿಂಗ್ಟನ್‌ ಸುಂದರ್‌ ಮೊದಲ ಇನ್ನಿಂಗ್ಸ್‌ನಲ್ಲಿ 62ರನ್‌(144 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರು. ವಾಷಿಂಗ್ಟನ್‌ ಸುಂದರ್‌ ಮತ್ತು ಶಾರ್ದೂಲ್‌ ಠಾಕೂರ್‌ 7ನೇ ವಿಕೆಟ್‌ಗೆ 123 ರನ್‌ಗಳ ಜೊತೆಯಾಟವಾಡಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ 22 ರನ್‌(29 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದರು. ಈ ವೇಳೆ ಪಂದ್ಯಶ್ರೇಷ್ಠ ಪುರಸ್ಕೃತ ರಿಷಭ್‌ ಪಂತ್‌ ಜೊತೆ ಸೇರಿ 6ನೇ ವಿಕೆಟ್‌ಗೆ 55 ಎಸೆತಗಳಲ್ಲಿ 53 ರನ್‌ ಜೊತೆಯಾಟವಾಡಿ ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

Comments

Leave a Reply

Your email address will not be published. Required fields are marked *