ಕೊಪ್ಪಳ: ಕರ್ನಾಟಕ ಗ್ರಾಮೀಣ ಬ್ಯಾಂಕ್‍ಗೆ ಕನ್ನ ಹಾಕಿರುವ ಕಳ್ಳರು ಸುಮಾರು ಒಂದು ಕೋಟಿಗೂ ಅಧಿಕ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರ ಗ್ರಾಮದಲ್ಲಿ ನಡೆದಿದೆ.

ಬೇವೂರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಶಟರ್ಸ್ ಕಟ್ ಮಾಡಿ ದುಷ್ಕರ್ಮಿಗಳು ದರೋಡೆ ಮಾಡಿದ್ದು, ಕೃತ್ಯಕ್ಕೆ ಗ್ಯಾಸ್ ಕಟರ್ ಬಳಕೆ ಮಾಡಿದ್ದಾರೆ. ಬ್ಯಾಂಕ್‍ನಲ್ಲಿ ಎಷ್ಟು ದರೋಡೆ ನಡೆದಿದೆ ಎಂಬ ಬಗ್ಗೆ ಪರಿಶೀಲನೆ ಬಳಿಕವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಸದ್ಯ 1.50 ಕೋಟಿ ರೂ. ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ, ಹಣವನ್ನು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ ರಾತ್ರಿ ಘಟನೆ ನಡೆದಿದೆ. ಗ್ಯಾಸ್ ಕಟರ್ ಬಳಸಿ ಶಟರ್ಸ್ ಮುರಿದು ಬ್ಯಾಂಕ್ ಒಳಗೆ ನುಗ್ಗಿರುವ ಕಳ್ಳರು ಹಣದೊಂದಿಗೆ ಬ್ಯಾಂಕ್‍ನಲ್ಲಿದ್ದ ಸಿ.ಸಿ.ಕ್ಯಾಮೆರಾದ ಹಾರ್ಡ್ ಡಿಸ್ಕನ್ನು ಕದ್ದು ಪರಾರಿಯಾಗಿದ್ದಾರೆ. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಹಾಜರಾದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕಿನ ಕಬ್ಬಿಣದ ರಾಡ್ ಕತ್ತರಿಸಿ ಹಣ, ಆಭರಣ ದೋಚಿದ್ದಾರೆ ಎಂದು ಸಿಪಿಐ ನಾಗರೆಡ್ಡಿ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಅತೀ ದೊಡ್ಡ ಕಳ್ಳತನ ಇದು ಎನ್ನಲಾಗಿದ್ದು, ಸ್ಥಳಕ್ಕೆ ಕೊಪ್ಪಳ ಎಸ್.ಪಿ.ಜಿ ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬ್ಯಾಂಕ್ ಅಧಿಕಾರಿಗಳ ಬಳಿಯೂ ಮಾಹಿತಿ ಸಂಗ್ರಹಿಸಿದ್ದಾರೆ.

Leave a Reply