ಬೌಲಿಂಗ್, ಫೀಲ್ಡಿಂಗ್‍ನಲ್ಲಿ ಡೆಲ್ಲಿ ಮಿಂಚಿಂಗ್ – ರಬಾಡಾ ದಾಳಿಗೆ ರಾಜಸ್ಥಾನ್ ಆಲೌಟ್

– ಪೆವಿಲಿಯನ್ ಪೆರೇಡ್ ನಡೆಸಿದ ರಾಯಲ್ಸ್ ಆಟಗಾರರು
– 10 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಡೆಲ್ಲಿ

ಶಾರ್ಜಾ: ಐಪಿಎಲ್ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 46 ರನ್‍ಗಳ ಭರ್ಜರಿ ಜಯ ಸಾಧಿಸಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಇಂದು ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ಡೆಲ್ಲಿ ತಂಡ ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 184 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ಪರಿಣಾಮ 19.4 ಓವರಿನಲ್ಲಿ ಆಲೌಟ್ ಆಯ್ತು. 46 ರನ್‍ಗಳ ಅಂತರದಲ್ಲಿ ಗೆದ್ದ ಡೆಲ್ಲಿ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದರೆ, 8 ಅಂಕಗಳಿಸಿದ ಮುಂಬೈ 2ನೇ ಸ್ಥಾನಕ್ಕೆ ಜಾರಿತು.

ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಡೆಲ್ಲಿ ಕಮಾಲ್
ಆರಂಭದಲ್ಲಿ ವಿಕೆಟ್ ಕಳೆದುಕೊಂಡರು ಡೆಲ್ಲಿ ಕೊನೆಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಕಲೆಹಾಕಿತು. ಅಂತೆಯೇ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ ಡೆಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಉತ್ತಮವಾಗಿ ಬೌಲ್ ಮಾಡಿದ ಕಗಿಸೊ ರಬಾಡಾ ಮೂರು ವಿಕೆಟ್ ಪಡೆದರೆ ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಆಕ್ಸರ್ ಪಟೇಲ್, ಹರ್ಷಲ್ ಪಟೇಲ್ ಮತ್ತು ಅನ್ರಿಕ್ ನಾಟ್ರ್ಜೆ ಒಂದು ವಿಕೆಟ್ ಕಿತ್ತರು. ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡಿದ ಹೆಟ್ಮೆಯರ್ ಉತ್ತಮ ಎರಡು ಕ್ಯಾಚ್ ಹಿಡಿದರು.

ಡೆಲ್ಲಿ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದರು. ಆದರೆ ಮೂರನೇ ಓವರಿಗೆ ಬೌಲಿಂಗ್ ಬಂದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ಎಂಟು ಬಾಲಿಗೆ 13 ರನ್ ಸಿಡಿಸಿದ್ದ ಬಟ್ಲರ್ ಅವರನ್ನು ಔಟ್ ಮಾಡಿದರು. ನಂತರ ಒಂದಾದ ನಾಯಕ ಸ್ಟೀವ್ ಸ್ಮಿತ್ ಮತ್ತು ಯಶಸ್ವಿ ಜೈಸ್ವಾಲ್ ತಾಳ್ಮೆಯ ಆಟಕ್ಕೆ ಮುಂದಾದರು. ಪರಿಣಾಮ ರಾಜಸ್ಥಾನ್ ತಂಡ ಆರು ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 41 ರನ್ ಸೇರಿಸಿತು.

ನಂತರ ಜೈಸ್ವಾಲ್ ಮತ್ತು ಸ್ಮಿತ್ 34 ಬಾಲಿನಲ್ಲಿ 42 ರನ್‍ಗಳ ಜೊತೆಯಾಟವಾಡಿದರು. ಆದರೆ 8ನೇ ಓವರಿನ ಮೊದಲ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸ್ಮಿತ್ ಅನ್ರಿಕ್ ನಾಟ್ರ್ಜೆ ಅವರಿಗೆ ವಿಕೆಟ್ ಒಪ್ಪಿಸಿದರು. 17 ಬಾಲಿಗೆ 24 ರನ್ ಸಿಡಿಸಿ ಬೌಂಡರಿ ಬಳಿ ಶಿಮ್ರಾನ್ ಹೆಟ್ಮಿಯರ್ ಹಿಡಿದು ಸೂಪರ್ ಕ್ಯಾಚಿಗೆ ಸ್ಮಿತ್ ಬಲಿಯಾದರು. ನಂತರ 10ನೇ ಓವರಿನ 3ನೇ ಬಾಲಿನಲ್ಲಿ ಐದು ರನ್ ಗಳಿಸಿ ಸಂಜು ಸ್ಯಾಮ್ಸನ್ ಅವರು ಪೆವಿಲಿಯನ್ ಸೇರಿದರು.

ನಂತರ ಬಂದ ಮಹಿಪಾಲ್ ಲೋಮರ್ ಅವರು ಕೇವಲ ಒಂದು ರನ್ ಗಳಿಸಿ ಬಂದ ದಾರಿಯಲ್ಲೇ ಪೆವಿಲಯನ್ ಸೇರಿದರು. ಈ ಮೂಲಕ 12 ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 82 ರನ್ ಸೇರಿಸತು. ಆದರೆ 12ನೇ ಓವರಿನ ಮೊದಲ ಬಾಲಿನಲ್ಲೇ 36 ಬಾಲಿಗೆ 34 ರನ್ ಸಿಡಿಸಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಅವರು ಮಾರ್ಕಸ್ ಸ್ಟೋಯಿನಿಸ್ ಅವರ ಎಸೆತಕ್ಕೆ ಬೌಲ್ಡ್ ಆದರು.

ಜೈಸ್ವಾಲ್ ಔಟ್ ಆದ ನಂತರ ಕಣಕ್ಕಿಳಿದ ಆಂಡ್ರ್ಯೂ ಟೈ ಅವರು ಲೆಗ್ ಸೈಡ್ ಕಡೆ ದೊಡ್ಡ ಹೊಡೆತಕ್ಕೆ ಕೈಹಾಕಿ ಕಗಿಸೊ ರಬಾಡಾ ಹಿಡಿದ ಡೇಯ್ ಕ್ಯಾಚಿಗೆ ಬಲಿಯಾದರು. ನಂತರ 14ನೇ ಓವರಿನ 5ನೇ ಬಾಲಿನಲ್ಲಿ ಎರಡು ರನ್ ಹೊಡೆದು ಜೋಫ್ರಾ ಆರ್ಚರ್ ಅವರು ಔಟ್ ಆಗಿ ಡಗೌಟ್ ಸೇರಿದರು. ನಂತರ 17ನೇ ಓವರ್ ಎರಡನೇ ಬಾಲಿನಲ್ಲಿ ಶ್ರೇಯಾಸ್ ಗೋಪಾಲ್ ಅವರು ಔಟ್ ಆದರು. ನಂತರ ಬಮದ ಯಾವ ಬ್ಯಾಟ್ಸ್ ಮ್ಯಾನ್ ಕೂಡ ಕ್ರೀಸಿನಲ್ಲಿ ನಿಲ್ಲಲಿಲ್ಲ.

Comments

Leave a Reply

Your email address will not be published. Required fields are marked *