ಬೇಲ್ ಪಡೆದು 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

ಹುಬ್ಬಳ್ಳಿ: ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು 21 ವರ್ಷದಿಂದ ಪರಾರಿಯಾಗಿದ್ದ ಕಳ್ಳನನ್ನು ಹುಬ್ಬಳ್ಳಿ ಶಹರ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಅಮರಗೋಳದ ಚಿಕ್ಕೇರಿ ಫ್ಲಾಟ್ ಸುಣಗಾರಬಟ್ಟಿ ನಿವಾಸಿಯಾಗಿದ್ದ ಶಿದ್ಲಿಂಗಪ್ಪ ಚಂದ್ರಾಮಪ್ಪ ಬಾಗಲಕೋಟೆ ಅಲಿಯಾಸ್ ಬಾಗಲೇ ಬಂಧಿತ ಆರೋಪಿಯಾಗಿದ್ದಾನೆ. ಈತ ಹುಬ್ಬಳ್ಳಿಯ ರಾಧಾಕೃಷ್ಣನಗರದಲ್ಲಿ ಮಹೇಶ ಟೇಲರ್ ಅಂಗಡಿ ಕೀಲಿ ಮುರಿದು ಕಳ್ಳತನ ಮಾಡಿದ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆದರೆ ಬಳಿಕ ಹೆಸರು ಬದಲಿಸಿಕೊಂಡು ಪೊಲೀಸರ ಕಣ್ತಪ್ಪಿಸಿ ಅಲೆಮಾರಿಯಾಗಿ ಜೀವನ ನಡೆಸುತ್ತಿದ್ದ. ಸದ್ಯ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಎಸ್.ಬಿ.ಕಟ್ಟಿಮನಿ ಯಶಸ್ವಿಯಾಗಿದ್ದಾರೆ. ಆತನ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿ, ಆತನ ಫಿಂಗರ್ ಪ್ರಿಂಟ್ ಮೂಲಕ ಸಿದ್ದಪ್ಪನಾಗಿದ್ದ ಶಿದ್ಲಿಂಗಪ್ಪನನ್ನು ಪತ್ತೆ ಮಾಡಿದ್ದಾರೆ.

ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಪೊಲೀಸ ಇನ್‍ಸ್ಪೆಕ್ಟರ್ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಠಾಣೆಯ ಪಿಎಸ್‍ಐ ಬಿ.ಎನ್.ಸಾತನ್ನವರ, ಎಎಸ್‍ಐ ಆರ್.ಬಿ.ಚಪ್ಪರಮನಿ ಹಾಗೂ ಸಿಬ್ಬಂದಿಯವರಾದ ಎಸ್.ಬಿ.ಕಟ್ಟಿಮನಿ, ಕೆ.ಎಚ್.ರಗಣಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಪತ್ತೆ ಮಾಡಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪೊಲೀಸರ ತನಿಖೆಗೆ ಮೆಚ್ಚುಗೆ ಸೂಚಿಸಿರುವ ಪೊಲೀಸ್ ಆಯುಕ್ತ ಆರ್.ದಿಲೀಪ್ ಬಹುಮಾನ ಘೋಷಣೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *