ಬೇರೆಯವನ ಜೊತೆ ಟಾಕಿಂಗ್ – ಪತಿ ಪ್ರಶ್ನಿಸಿದ್ದಕ್ಕೆ ಮಗನನ್ನೇ ಕೊಂದ ತಾಯಿ

ಹಾಸನ : ಬೇರೊಬ್ಬ ವ್ಯಕ್ತಿಯ ಜೊತೆ ಫೋನ್ ನಲ್ಲಿ ಮಾತನಾಡಿದ್ದನ್ನು ಪತಿ ಪ್ರಶ್ನಿಸಿದ್ದಕ್ಕೆ ಸ್ವಂತ ಮಗನನ್ನೇ ತಾಯಿ ಕೊಲೆಮಾಡಿದ ಘಟನೆ ನುಗ್ಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆ ಮಾಡಿದ ಆರೋಪಿಯನ್ನು ಸುಮಾ ಎಂದು ಗುರುತಿಸಲಾಗಿದೆ. ಸುಮಾ ಚನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಜನವರಿ 19ರಂದು ಪರ ಪುರುಷನೊಂದಿಗೆ ಫೋನ್‍ನಲ್ಲಿ ಮಾತನಾಡಿದ ಕಾರಣಕ್ಕೆ ಪತಿ ನಂಜಪ್ಪ ಮತ್ತು – ಪತ್ನಿ ಸುಮಾ ನಡುವೆ ಗಲಾಟೆ ನಡೆದಿದೆ.

ಬಳಿಕ ಬೇಸರಗೊಂಡ ನಂಜಪ್ಪ ತಮ್ಮ ಜಮೀನಿನ ಬಳಿ ಹೋಗಿದ್ದರು. ಸ್ವಲ್ಪ ಸಮಯದ ನಂತರ ಮಗ ತನ್ಮಯ್ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ ಎಂದು ಗಂಡನಿಗೆ ಸುಮಾ ಬಂದು ತಿಳಿಸಿದ್ದಾರೆ. ನಂತರ ತನ್ಮಯ್‍ನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ.

ಮಗನ ಸಾವಿನ ಬಗ್ಗೆ ಅನುಮಾನದಿಂದ ನಂಜಪ್ಪ ಜ. 21ರಂದು ನುಗ್ಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಜ. 25ರಂದು ಮೃತ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯಲ್ಲಿ ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಮಗು ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ನಂತರ ತಾಯಿ ಸುಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಈ ವೇಳೆ ಪೊಲೀಸರ ಬಳಿ ಮಗುವನ್ನು ಕೊಲೆ ಮಾಡಿರುವುದಾಗಿ ತಾಯಿ ಸುಮಾ ಒಪ್ಪಿಕೊಂಡಿದ್ದಾಳೆ. ಪ್ರಕರಣ ಸಂಬಂಧ ಕೇಸು ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣದ ನುಗ್ಗೆಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ನಡೆಸಿ ಆರೋಪಿ ಸುಮಾಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *